ನವದೆಹಲಿ : ಬಿದಿರು ಮಾರುಕಟ್ಟೆಯಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಬಿದಿರು ಬೆಂಕಿಗಾಹುತಿಯಾಗಿರುವ ಘಟನೆ ದೆಹಲಿಯ ಕಲ್ಯಾಣಪುರಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಧಾವಿಸಿದ ಎಂಟು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದೆ.
ಅಗ್ನಿ ಅವಘಡದಿಂದ ಯಾವುದೇ ಸಾವು - ನೋವು ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದು, ವಿದ್ಯುತ್ ತಂತಿಯ ಕಿಡಿಯ ಕಾರಣದಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಗೊತ್ತಾಗುತ್ತಿದ್ದು, ಬೆಂಕಿ ನಂದಿಸಿದ ಬಳಿಕ ಹೆಚ್ಚಿನ ತನಿಖೆ ಕೈಗೊಂಡು, ಘಟನೆಗೆ ಮೂಲ ಕಾರಣ ಕಂಡು ಹಿಡಿಯಲಾಗುತ್ತದೆ ಎಂದು ಅಗ್ನಿಶಾಮಕ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಹೇಳಿದ್ದಾರೆ.
ದೆಹಲಿಯ ಬಿದಿರು ಮಾರುಕಟ್ಟೆಯಲ್ಲಿ ಅಗ್ನಿ ಆಕಸ್ಮಿಕ ಸುಮಾರು 12.30ರ ವೇಳೆಗೆ ಅವಘಡ ಸಂಭವಿಸಿದ್ದು, ಒಂದು ಗಂಟೆಗೆ ಅಗ್ನಿಶಾಮಕ ಇಲಾಖೆಯ ಕರೆ ಬಂದಿತ್ತು. ಸದ್ಯಕ್ಕೆ ಆರಂಭದಲ್ಲಿ ನಾಲ್ಕು ಅಗ್ನಿಶಾಮಕ ವಾಹನಗಳನ್ನು ನಾವು ಕಳಿಸಿದ್ದೆವು. ನಂತರ ಇನ್ನೂ ನಾಲ್ಕು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಯಿತು. ಒಟ್ಟು 50 ಅಗ್ನಿಶಾಮಕ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಮನೋಜ್ ಕುಮಾರ್ ಶರ್ಮಾ ಸ್ಪಷ್ಟನೆ ನೀಡಿದರು.
ಅವಘಡ ನಡೆದ ಸ್ಥಳಕ್ಕೆ ಧಾವಿಸಿ ಸ್ಥಳೀಯ ಶಾಸಕ ಕುಲದೀಪ್ ಕುಮಾರ್, ಬೆಂಕಿಯನ್ನು ತ್ವರಿತವಾಗಿ ನಂದಿಸಿ, ಹೆಚ್ಚಿನ ಅವಘಡ ತಪ್ಪಿಸಿದ್ದಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ:ಜಮ್ಮು ಕಾಶ್ಮೀರದ ಆಕ್ರಮಿತ ಪ್ರದೇಶಗಳಿಂದ ಪಾಕಿಸ್ತಾನ ಜಾಗ ಖಾಲಿ ಮಾಡಬೇಕು: ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯ