ಭಂಡಾರ:ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ ಹತ್ತು ಶಿಶುಗಳಿಗೆ ಸಂತಾಪ ಸೂಚಿಸಲು ಬಿಜೆಪಿ ಸೋಮವಾರ ಮಹಾರಾಷ್ಟ್ರದ ಭಂಡಾರ ಜಿಲ್ಲೆ ಬಂದ್‌ಗೆ ಕರೆ ನೀಡಿದೆ ಎಂದು ಪಕ್ಷದ ಸಂಸದರು ತಿಳಿಸಿದ್ದಾರೆ.
ಶನಿವಾರ ಸಂಭವಿಸಿದ ಘಟನೆಯ ಬಗ್ಗೆ ನ್ಯಾಯಾಂಗ ವಿಚಾರಣೆ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಬೇಕೆಂದು ಪಕ್ಷ ಬಯಸಿದೆ ಅಂತಾ ಭಂಡಾರಾದ ಬಿಜೆಪಿ ಸಂಸದ ಸುನಿಲ್ ಮೆಂಧೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ದುಃಖಿತ ಕುಟುಂಬಗಳಿಗೆ 10 ಲಕ್ಷ ರೂ.ಗಳ ಪರಿಹಾರ ದೊರೆಯಬೇಕೆಂದು ನಾವು ಸಹ ಬಯಸುತ್ತೇವೆ’ ಎಂದು ಅವರು ಇದೇ ವೇಳೆ ಸರ್ಕಾರವನ್ನ ಒತ್ತಾಯಿಸಿದರು.
ಓದಿ:ಆಸ್ಪತ್ರೆಯ ಬೆಂಕಿ ಅವಘಡದಲ್ಲಿ ನವಜಾತ ಶಿಶುಗಳ ಸಾವು: ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ, ಅವರು ತಕ್ಷಣ ಸಿವಿಲ್ ಸರ್ಜನ್, ವೈದ್ಯರು ಮತ್ತು ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಿ ವಿಚಾರಣೆಗೆ ಆದೇಶ ನೀಡುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ಏನೂ ಆಗಲಿಲ್ಲ ಎಂದು ಸಂಸದರು ಬೇಸರ ಸಿಎಂ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಗಮನ ಸೆಳೆಯಲು ಸೋಮವಾರ ಭಂಡಾರದಲ್ಲಿ ಬಂದ್ ಕರೆ ಮಾಡಲು ಬಿಜೆಪಿ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದರು.
ಜನವರಿ 9ರ ಮುಂಜಾನೆ ಪೂರ್ವ ಮಹಾರಾಷ್ಟ್ರದ ಭಂಡಾರದಲ್ಲಿರುವ ಜಿಲ್ಲಾ ಜನರಲ್ ಆಸ್ಪತ್ರೆಯ ನವಜಾತು ಆರೈಕೆ ವಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಹತ್ತು ಶಿಶುಗಳು ಸಾವನ್ನಪ್ಪಿದ್ದವು. ವಾರ್ಡ್‌ನಲ್ಲಿದ್ದ 17 ಶಿಶುಗಳಲ್ಲಿ ಏಳು ಮಕ್ಕಳನ್ನು ರಕ್ಷಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದರು.