ಅಲ್ವರ್, ರಾಜಸ್ಥಾನ: ಅಲ್ವರ್ ಜಿಲ್ಲೆಯ ಸರಿಸ್ಕಾ ಅರಣ್ಯದಲ್ಲಿ ಹಠಾತ್ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಅಲ್ವರ್ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿ ನಂದಿಸುವ ಕಾರ್ಯ ರಾತ್ರಿಯಿಡೀ ನಡೆದಿದೆ. ಸರಿಸ್ಕಾ ಅರಣ್ಯದ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು, ಅರಣ್ಯ ಸಿಬ್ಬಂದಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸರಿಸ್ಕಾದ ಡಿಎಫ್‌ಒ ಸುದರ್ಶನ್ ಶರ್ಮಾ, ಅಲ್ವಾರ್‌ನ ಸಿಸಿಎಫ್ ಆರ್‌ಎನ್ ಮೀನಾ, ಅರಣ್ಯ ಇಲಾಖೆಯ ರೇಂಜರ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.
ಸರಿಸ್ಕಾ ಅರಣ್ಯದಲ್ಲಿ ಮರಗಳು ಒಣಗಿರುವ ಕಾರಣದಿಂದ ಬಹುಬೇಗ ಬೆಂಕಿ ವ್ಯಾಪಿಸಿದೆ. ರಾತ್ರಿ ಆರಂಭವಾದ ಬೆಂಕಿ ನಂದಿಸುವ ಕಾರ್ಯ ಬೆಳಗಿನ ಜಾವ ಐದು ಗಂಟೆಯವರೆಗೆ ನಡೆದಿದ್ದು, ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ ಸುಮಾರು 500 ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.