ಅನಕಪಲ್ಲಿ (ಆಂಧ್ರ ಪ್ರದೇಶ): ಜಿಲ್ಲೆಯ ಪರವಾಡ ಫಾರ್ಮಾ ಸಿಟಿಯಲ್ಲಿ ಅವಘಡವೊಂದು ಸಂಭವಿಸಿದೆ. ಸೋಮವಾರ ಮಧ್ಯಾಹ್ನ ಲಾರಸ್ ಲ್ಯಾಬ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನೌಕರರು ಬೆಚ್ಚಿಬಿದ್ದಿದ್ದಾರೆ. ಬೆಂಕಿಯಲ್ಲಿ ನಾಲ್ವರು ಸಜೀವ ದಹನವಾಗಿದ್ದು, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ದ್ರಾವಕ ಸೋರಿಕೆಯಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗ್ತಿದೆ.
ನಾಲ್ವರು ಸಾವು: ಇತ್ತೀಚೆಗೆ ಪರವಾಡ ಫಾರ್ಮಸಿಯಲ್ಲಿ ಹೆಚ್ಚು ಅಪಘಡಗಳು ಸಂಭವಿಸುತ್ತಿವೆ. ಸರಣಿ ಅಪಘಡಗಳಿಂದ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸೋಮವಾರ ಮಧ್ಯಾಹ್ನ ಲಾರಸ್ ಲ್ಯಾಬ್ಸ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡು ವಿಶಾಖಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉದ್ಯಮದ ಮೂರನೇ ಘಟಕ - 8ರ ಉತ್ಪಾದನಾ ವಿಭಾಗದಲ್ಲಿ ರಿಯಾಕ್ಟರ್ ಮತ್ತು ಡ್ರೈಯರ್‌ಗಳ ಬಳಿ ಮಧ್ಯಾಹ್ನ 3:15 ಕ್ಕೆ ಬೆಂಕಿ ಕಾಣಿಸಿಕೊಂಡಿದೆ.
ಇದನ್ನೂ ಓದಿ:ಬಾಲಕರ ಹಾಸ್ಟೆಲ್‌ನಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ಅನಾಹುತ
ಮೃತದೇಹ ಕೆಜಿಎಚ್ ಶವಾಗಾರಕ್ಕೆ ರವಾನೆ: ರಬ್ಬರ್‌ನಿಂದ ಮಾಡಿದ ಎಲ್ಲಾ ಉಪಕರಣಗಳು ಸುಟ್ಟು ಬೂದಿಯಾಗಿವೆ. ಬೆಂಕಿ ತಗ್ಗಿದ ಬಳಿಕ ಘಟನಾ ಸ್ಥಳವನ್ನು ಪರಿಶೀಲಿಸಿದಾಗ ನಾಲ್ವರು ಸಜೀವ ದಹನಗೊಂಡಿರುವುದು ಕಂಡು ಬಂದಿದೆ. ಮತ್ತೊಬ್ಬರು ತೀವ್ರ ಗಾಯಗಳಿಂದ ಬಳಲುತ್ತಿದ್ದರು. ಅವರ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿದ್ದರೂ, ಬದುಕುಳಿಯಬಹುದು ಎಂಬ ಭರವಸೆಯೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈಗಾಗಲೇ ನಾಲ್ವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮೃತದೇಹಗಳನ್ನು ವಿಶಾಖ ಕೆಜಿಎಚ್ ಶವಾಗಾರಕ್ಕೆ ರವಾನಿಸಲಾಗಿದೆ.
ಸಮಸ್ಯೆ ಸರಿಪಡಿಸುವಾಗ ನಡೆದ ಅವಘಡ: ದ್ರಾವಕವು ಸೋರಿಕೆಯಾಗುತ್ತಿದೆ ಎಂದು ಮೊದಲೇ ಉದ್ಯೋಗಿಗಳಿಗೆ ತಿಳಿದಿತ್ತು. ಹೀಗಾಗಿ ಅವರು ಇದನ್ನು ಸರಿಪಡಿಸಲು ಯತ್ನಿಸುತ್ತಿರುವಾಗಲೇ ಬೆಂಕಿ ತಗುಲಿದೆ. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಅವರು ಬೆಂಕಿಗೆ ಆಹುತಿಯಾಗಿದ್ದರು. ಮಧ್ಯಾಹ್ನದ ವೇಳೆ ಅವಘಡ ಸಂಭವಿಸಿದರೂ ಸಂಜೆ 7 ಗಂಟೆವರೆಗೂ ಗೊಂದಲ ಸೃಷ್ಟಿಯಾಗಿತ್ತು. ಭೂಗರ್ಭದಲ್ಲಿ ಅಪಘಾತ ನಡೆದಿದ್ದರಿಂದ ಸ್ವಲ್ಪ ಹೊಗೆ ಬಿಟ್ಟರೆ ಗಂಭೀರತೆಯ ಲಕ್ಷಣ ಕಾಣಲಿಲ್ಲ.