ನವದೆಹಲಿ:ನಗರದ ಪಿತಾಂಪುರ ಪ್ರದೇಶದ ಮನೆಯೊಂದರಲ್ಲಿ ಗುರುವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿದ್ದು, ಎರಡು ಕುಟುಂಬಗಳ ಆರು ಮಂದಿ ಸಜೀವ ದಹನವಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರಿದ್ದಾರೆ. ಬಹುಮಹಡಿ ಕಟ್ಟಡದಲ್ಲಿ ರಾತ್ರಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳವು ಸ್ಥಳೀಯ ಪೊಲೀಸರ ನೆರವಿನಿಂದ ಸ್ಥಳಕ್ಕೆ ಧಾವಿಸಿ ಏಳು ಮಂದಿಯನ್ನು ರಕ್ಷಿಸಿ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ರವಾನಿಸಿದರು. ಎಂಟು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೇಲಿನ ಮೂರು ಮಹಡಿಗಳು ದಟ್ಟ ಹೊಗೆಯಿಂದ ಆವರಿಸಿದ್ದವು ಎಂದು ಪೊಲೀಸರು ತಿಳಿಸಿದರು.
ಮೃತರ ವಯಸ್ಸು ಅಂದಾಜು 25ರಿಂದ 60ರ ನಡುವೆ ಇದೆ. ನೆಲಮಹಡಿಯಲ್ಲಿ ವಾಹನ ನಿಲುಗಡೆ, ಉಳಿದ ಮಹಡಿಗಳಲ್ಲಿ ಜನರು ವಾಸಿಸುತ್ತಿದ್ದರು. ಅನಾಹುತಕ್ಕೆ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಕೆಲವರು ಮನೆಯೊಳಗೆ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ದಳದ ವಾಹನಗಳು ಮೊದಲು ಬೆಂಕಿ ನಿಯಂತ್ರಿಸುವ ಕಾರ್ಯ ಆರಂಭಿಸಿದ್ದು, ಬಳಿಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ 7 ಮಂದಿಯನ್ನು ಒಬ್ಬೊಬ್ಬರಾಗಿ ರಕ್ಷಿಸಿದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಮೊದಲು ಮೂವರು ಸಾವನ್ನಪ್ಪಿರುವುದಾಗಿ ಘೋಷಿಸಿದರು. ಉಳಿದ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದರು. ಬಳಿಕ ಮತ್ತೆ ಮೂವರು ಸಾವನ್ನಪ್ಪಿದರು. ಇದೀಗ ಶವಗಳನ್ನು ರೋಹಿಣಿಯಲ್ಲಿರುವ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರ ಕುಟುಂಬಗಳು ಇಲ್ಲಿ ಬಾಡಿಗೆಗೆ ವಾಸವಿದ್ದರು. ಅಕ್ಕಪಕ್ಕದ ಜನರೊಂದಿಗೆ ಹೆಚ್ಚು ಸಂಪರ್ಕವಿರದ ಕಾರಣ ಮೃತಪಟ್ಟವರ ಕುರಿತು ಹೆಚ್ಚಿನ ಮಾಹಿತಿ ಗೊತ್ತಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಐವರ ಗುಂಡಿಟ್ಟು ಹತ್ಯೆ