ನಾಂದೇಡ್ (ಮಹಾರಾಷ್ಟ್ರ): ನಾಂದೇಡ್ ಡಾ.ಶಂಕರರಾವ್ ಚವ್ಹಾಣ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ಎಸ್.ಆರ್. ವಾಕೋಡೆ ಹಾಗೂ ಮಕ್ಕಳ ವಿಭಾಗದ ವೈದ್ಯರ ವಿರುದ್ಧ ಬುಧವಾರ ರಾತ್ರಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಆಸ್ಪತ್ರೆಯಲ್ಲಿ 22 ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಕಂದರ್ ತಾಲೂಕಿನ ಕುರುಳದಲ್ಲಿ ತಾಯಿ ಮತ್ತು ಮಗು ಆಸ್ಪತ್ರೆಯ ಮೃತಪಟ್ಟಿದ್ದರು. ಈ ಸಾವಿನ ಪ್ರಕರಣ ಸಂಬಂಧ ಕಾಮಾಜಿ ತೋಂಪೆ ಅವರು ನಾಂದೇಡ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅವರ ಸಂಬಂಧಿಕರು ಆಸ್ಪತ್ರೆಗೆ ಸೇರಿದಾಗ ವೈದ್ಯರು ಹೊರಗಿನಿಂದ 40,000 ರೂಪಾಯಿಗೂ ಹೆಚ್ಚು ಔಷಧಿಗಳನ್ನು ಖರೀದಿಸಲು ಒತ್ತಾಯಿಸಿದರು. ಅಲ್ಲದೇ ರಕ್ತ ಮತ್ತಿತರ ಪರೀಕ್ಷೆಗಳಿಗೆ ಹಣ ವ್ಯಯಿಸಬೇಕಾಗಿತ್ತು. ಆಸ್ಪತ್ರೆಯ ಡೀನ್ ಡಾ. ಎಸ್.ಆರ್.ವಾಕೋಡೆ ಮತ್ತು ಮಕ್ಕಳ ವಿಭಾಗದ ವೈದ್ಯರು ಉದ್ದೇಶಪೂರ್ವಕವಾಗಿ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ 41ಕ್ಕೆ ಏರಿಕೆ:ನಾಂದೇಡ್‌ನ ಡಾ. ಶಂಕರರಾವ್ ಚವ್ಹಾಣ್ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ದಿನ 24 ರೋಗಿಗಳು ಸಾವನ್ನಪ್ಪಿದ್ದಾರೆ. ಮರುದಿನ 7 ರೋಗಿಗಳು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸತತ ಮೂರನೇ ದಿನವೂ 6 ರೋಗಿಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ 2 ನವಜಾತ ಶಿಶುಗಳು ಮತ್ತು 4 ವಯಸ್ಕ ಪುರುಷರು ಸೇರಿದ್ದಾರೆ. ಈವರೆಗೆ ಸಾವಿನ ಸಂಖ್ಯೆ ಈಗ 41 ಕ್ಕೆ ತಲುಪಿದೆ. ಗಂಭೀರ ವಿಷಯ ಎಂದರೆ ಇದರಲ್ಲಿ 22 ಮಕ್ಕಳು ಸೇರಿದ್ದಾರೆ. ಆದರೆ, 25 ಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಇನ್ನೂ ಗಂಭೀರವಾಗಿದೆ. ಪ್ರಸ್ತುತ ಈ ಆಸ್ಪತ್ರೆಯಲ್ಲಿ 823 ರೋಗಿಗಳು ದಾಖಲಾಗಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದರು.