ಲಕ್ನೋ(ಉತ್ತರಪ್ರದೇಶ):16ನೇ ಶತಮಾನದ ಮಹಾಕವಿ ಎಂದೇ ಪ್ರಸಿದ್ಧಿ ಪಡೆದಿರುವ ಹನುಮನ ಭಕ್ತ ಸಂತ ತುಳಸಿದಾಸ್ ರಚಿತ ರಾಮಚರಿತಮಾನಸ ಮಹಾಕಾವ್ಯದ ಬಗ್ಗೆ ಸಮಾಜವಾದಿ ಪಕ್ಷದ ಎಂಎಲ್ಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಶುಕ್ರವಾರ ಎಂಎಲ್ಸಿ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಶಿವೇಂದ್ರ ಮಿಶ್ರಾ ಅವರು ಸ್ವಾಮಿ ಪ್ರಸಾದ್ ವಿರುದ್ದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಈ ಬಗ್ಗೆ ಡಿಸಿಪಿ ಅಪರ್ಣಾ ಕೌಶಿಕ್ ಮಾತನಾಡಿ, ರಾಮಚರಿತಮಾನಸ ಮಹಾಕಾವ್ಯದ ಬಗ್ಗೆ ಸಮಾಜವಾದಿ ಪಕ್ಷದ ಎಂಎಲ್ಸಿ ಸ್ವಾಮಿ ಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದರಿಂದ ಹಿಂದೂ ಧಾರ್ಮಿಕತೆಗೆ ಧಕ್ಕೆ ಉಂಟಾಗಿದ್ದು, ಕೂಡಲೇ ಅವರ ವಿರುದ್ದ ಪ್ರಕರಣ ದಾಖಲಿಸವಂತೆ ಬಿಜೆಪಿ ಪಕ್ಷದ ಕಾರ್ಯಕರ್ತ ದೂರನ್ನು ನೀಡಿದ್ದಾರೆ. ಈ ಹಿನ್ನೆಲೆ ಸ್ವಾಮಿ ಪ್ರಸಾದ್ ವಿರುದ್ದ ಐಪಿಸಿ ಸೆಕ್ಷನ್ 295ಎ, 298, 504, 505(2), 153ಎ ಅಡಿಯಲ್ಲಿ ಪ್ರಕರಣ ದಾಖಲಿಸಕೊಳ್ಳಲಾಗಿದೆ. ಅಲ್ಲದೇ ರಾಮಚರಿತಮಾನಸ ಮಹಾಕಾವ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಎಲ್ಲೆಡೆ ಹಿಂದೂ ಸಂಘಟನೆಗಳಿಂದ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಎಂಎಲ್ಸಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಇನ್ನು, ಜ.22ರಂದು ಎಂಎಲ್ಸಿ ಸ್ವಾಮಿ ಪ್ರಸಾದ್ ಮೌರ್ಯ, ರಾಮಚರಿತಮಾನಸ ಮಹಾಕಾವ್ಯದ ಕೆಲ ಭಾಗಗಳು 'ಜಾತೀಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಿಸುತ್ತವೆ' ಆದ ಕಾರಣ ಕವಿತೆಯನ್ನು ನಿಷೇಧಿಸದಬೇಕು ಎಂದು ಒತ್ತಾಯಿಸಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತ ಶಿವೇಂದ್ರ ಮಿಶ್ರಾ ರಾಮಚರಿತಮಾನಸ ಮತ್ತು ಸಂತ ತುಳಸಿದಾಸ್ ವಿರುದ್ಧ ಮೌರ್ಯ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಮೌರ್ಯ ಅವರ ಹೇಳಿಕೆ ಹಲವಾರು ನಾಯಕರು, ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.