ಕನೌಜ್(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಿವಾದಿತ ಪೋಸ್ಟ್ ಮಾಡಿರುವ ಆರೋಪದ ಮೇಲೆ ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಜುಕರ್ಬರ್ಗ್ ಜೊತೆಗೆ ಇತರ 49 ಜನರ ಹೆಸರು ಇದರಲ್ಲಿ ಸೇರ್ಪಡೆಯಾಗಿದೆ. ವಿಶೇಷವೆಂದರೆ ಅಖಿಲೇಶ್ ಯಾದವ್ ವಿರುದ್ಧ ಖುದ್ದಾಗಿ ಜುಕರ್ಬರ್ಗ್ ಯಾವುದೇ ರೀತಿಯ ವಿವಾದಿತ ಪೋಸ್ಟ್ ಹಾಕಿಲ್ಲ. ಆದರೆ, ಅವಹೇಳನಕಾರಿ ಕಾಮೆಂಟ್ ಹಾಕಲು ಕೆಲವರು ಸಾಮಾಜಿಕ ಜಾಲತಾಣ ಫೇಸ್ಬುಕ್ ಬಳಕೆ ಮಾಡಿರುವ ಕಾರಣ ಎಫ್ಐಆರ್ ದಾಖಲಾಗಿದೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸರಹತಿ ಗ್ರಾಮದ ನಿವಾಸಿ ಅಮಿತ್ ಕುಮಾರ್ ಈ ಪ್ರಕರಣ ದಾಖಲು ಮಾಡಿದ್ದು, ಅಖಲೇಶ್ ಯಾದವ್ ವಿರುದ್ಧ ಅವಹೇಳನಕಾರಿ ಕಮೆಂಟ್ ಪೋಸ್ಟ್ ಮಾಡಿದ್ದಕ್ಕಾಗಿ ಜುಕರ್ಬರ್ಗ್ ಮತ್ತು ಇತರ 49 ಜನರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಬುವಾ ಬಾಬುವಾ ಎಂಬ ಶೀರ್ಷಕೆಯಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಅಖಿಲೇಶ್ ಯಾದವ್ ಇಮೇಜ್ಗೆ ದಕ್ಕೆ ತರಲಾಗಿದೆ ಎಂದು ದೂರಿನಲ್ಲಿ ದಾಖಲು ಮಾಡಲಾಗಿದೆ.