ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಿಂದಿಸಿದ ಆರೋಪದ ಮೇಲೆ ಟಿಎಂಸಿ ಶಾಸಕಿ ಸಾಬಿತ್ರಿ ಮಿತ್ರಾ ವಿರುದ್ಧ ಬಿಜೆಪಿ ಮಂಗಳವಾರ ಪೊಲೀಸ್ ದೂರು ದಾಖಲಿಸಿದೆ.
ಬಿಜೆಪಿಯ ಹಿರಿಯ ನಾಯಕ ಅಗ್ನಿಮಿತ್ರ ಪೌಲ್ ನೇತೃತ್ವದಲ್ಲಿ ಬಿಜೆಪಿಯ ಆರು ಮಹಿಳಾ ಶಾಸಕರು ಮಾಲ್ಡಾದ ಮಾಣಿಕ್‌ಚಕ್‌ನ ಟಿಎಂಸಿ ಶಾಸಕಿಯ ವಿರುದ್ಧ ಕೋಲ್ಕತ್ತಾದ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಮೋದಿ ಮತ್ತು ಶಾ ಅವರನ್ನು ಶಾಸಕಿ ಮಿತ್ರಾ, 'ದುರ್ಯೋಧನ' ಮತ್ತು 'ದುಶ್ಯಾಸನ' ಎಂದು ಕರೆದ ವಿಡಿಯೊ ವೈರಲ್ ಆದ ನಂತರ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ. ವೈರಲ್ ಆಗಿರುವ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.
ಇದಕ್ಕೂ ಹಿಂದಿನ ದಿನ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪಾಲ್ ಮತ್ತು ಇತರ ಬಿಜೆಪಿ ಶಾಸಕರು ಇದೇ ವಿಚಾರದ ಕುರಿತಾಗಿ ನಿಲುವಳಿ ಸೂಚನೆಯನ್ನು ಮಂಡನೆ ಮಾಡಿದ್ದರು. ಆದರೆ ಈ ವಿಚಾರ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದರು. ಇದರ ನಂತರ ಬಿಜೆಪಿಯ ಎಲ್ಲ ಶಾಸಕರು ಪ್ರತಿಭಟನೆ ನಡೆಸಿ ಸದನದಿಂದ ಹೊರ ನಡೆದರು. ಸಂಜೆ ಬಿಜೆಪಿಯ ಮಹಿಳಾ ಶಾಸಕರು ಮಿತ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಈ ದೇಶದ ಯಾವುದೇ ನಾಗರಿಕರು ಪ್ರಧಾನಿ ಮತ್ತು ಗೃಹ ಸಚಿವರ ಅಥವಾ ಯಾರೊಬ್ಬರ ವಿರುದ್ಧ ಇಂಥ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು. ಪೊಲೀಸರು ನಮ್ಮ ಭಾವನೆಗಳನ್ನು ಅರಿತುಕೊಂಡು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಪಾಲ್ ಹೇಳಿದರು.
ಇದನ್ನೂ ಓದಿ: SDPI ಸಮಾವೇಶಕ್ಕೆ ತೆರಳುತ್ತಿದ್ದ ಯುವಕನಿಂದ ಪೊಲೀಸರ ಅವಹೇಳನ ಆರೋಪ.. ವಿಡಿಯೋ ವೈರಲ್