ತಿರುವನಂತಪುರ:ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಧನದ ಸ್ಮರಣಾರ್ಥ ಕಾಂಗ್ರೆಸ್ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭಾಷಣದ ವೇಳೆ ಮೈಕ್ ಕೆಟ್ಟು ನಿಂತ ಘಟನೆಯಲ್ಲಿ ಆಪರೇಟರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಸದ್ಯ ಹೆಚ್ಚು ಚರ್ಚೆಯಲ್ಲಿದೆ. ಜುಲೈ 24ರಂದು ತಿರುವನಂತಪುರಂನಲ್ಲಿರುವ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ವಿವಾದಾತ್ಮಕ ಘಟನೆ ನಡೆದಿತ್ತು. ವಟ್ಯೂರ್ಕಾವು ತೊಪ್ಪುಮುಕ್ ಕಲ್ಲುಮಲ ರಸ್ತೆಯಲ್ಲಿರುವ ಎಸ್ ವಿ ಸೌಂಡ್ಸ್ ಮಾಲೀಕ ರಂಜಿತ್ ವಿರುದ್ಧ ತಿರುವನಂತಪುರ ಕಂಟೋನ್ಮೆಂಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಉಮ್ಮನ್ ಚಾಂಡಿ ಸ್ಮರಣಾರ್ಥ ಸಭೆಯಲ್ಲಿ ವಿಜಯನ್ ಅವರು ಭಾಗವಹಿಸುವ ಬಗ್ಗೆ ರಾಜಕೀಯ ಗದ್ದಲದ ನಡುವೆಯೂ ಪೊಲೀಸರ ಅಸಾಮಾನ್ಯ ನಡೆ ಹೆಚ್ಚು ವಿವಾದಾತ್ಮಕವಾಗಿದೆ. ವಿಷಯ ಹೆಚ್ಚು ವಿವಾದಕ್ಕೆ ಒಳಗಾಗುತ್ತಿರುವಾಗಲೇ ಮುಖ್ಯಮಂತ್ರಿ ಕಚೇರಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡ ಒಂದು ದಿನದ ನಂತರ ಸಿಎಂ ಪಿಣರಾಯಿ ಈ ಬಗ್ಗೆ ಹೇಳಿಕೆ ನೀಡಿದ್ದು, ಪ್ರಕರಣವನ್ನು ಮುಂದುವರಿಸಬೇಡಿ. ಭದ್ರತಾ ಲೋಪವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಭದ್ರತಾ ತಪಾಸಣೆ ನಡೆಸಿದ ನಂತರ ಉಪಕರಣಗಳನ್ನು ಹಿಂತಿರುಗಿಸುವಂತೆ ಮುಖ್ಯಮಂತ್ರಿ ಪೊಲೀಸರಿಗೆ ಸೂಚಿಸಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಈ ಸಭೆಯನ್ನು ಆಯೋಜಿಸಿತ್ತು. ಮುಖ್ಯಮಂತ್ರಿಯನ್ನು ಸಮಾರಂಭಕ್ಕೆ ಆಹ್ವಾನಿಸಿದಾಗಿನಿಂದಲೇ ಕಾಂಗ್ರೆಸ್‌ನಲ್ಲಿ ವಿವಾದಗಳು ಭುಗಿಲೆದ್ದಿತ್ತು. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸಲು ಕಾಂಗ್ರೆಸ್ ರಾಜ್ಯ ನಾಯಕತ್ವ ನಿರ್ಧರಿಸಿದ್ದರೆ, ಪಕ್ಷದ ಒಂದು ವರ್ಗ ಪಿಣರಾಯಿ ನೇತೃತ್ವದ ಸಿಪಿಎಂ ಸರ್ಕಾರ, ಮಹಿಳೆಯೊಬ್ಬರು ಮಾಡಿದ ಲೈಂಗಿಕ ಆರೋಪ ಹಾಗೂ ವಂಚನೆ ಪ್ರಕರಣಗಳ ಬಗ್ಗೆ ತನಿಖೆ ಆರಂಭಿಸುವ ಮೂಲಕ ಚಾಂಡಿ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿತ್ತು ಎಂದು ಆರೋಪಿಸಿ ಪಕ್ಷದ ಒಂದು ವರ್ಗ ಅಸಮಾಧಾನ ಹೊರ ಹಾಕಿತ್ತು.