ಬರ್ವಾನಿ(ಮಧ್ಯಪ್ರದೇಶ):ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳ ನಿರ್ವಹಣೆಗಾಗಿ ಸಂಗ್ರಹಿಸಿದ ಹಣವನ್ನು ರಾಜಕೀಯ ಮತ್ತು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುವ ಮೂಲಕ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ದೂರಿನ ಮೇರೆಗೆ ನರ್ಮದಾ ಬಚಾವೋ ಆಂದೋಲನದ ಮುಂದಾಳು ಮೇಧಾ ಪಾಟ್ಕರ್ ಹಾಗೂ ಇತರ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತೆಮ್ಲಾ ಬುಜುರ್ಗ್ ಗ್ರಾಮದ ನಿವಾಸಿ ಪ್ರೀತಮ್‌ರಾಜ್ ಬಡೋಲೆ ಎಂಬವರ ದೂರಿನ ಮೇರೆಗೆ ಬರ್ವಾನಿ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ. ದೂರುದಾರರು ಕೆಲವು ದಾಖಲೆಗಳನ್ನೂ ಒದಗಿಸಿದ್ದಾರೆ. ಈ ಪ್ರಕರಣ ಹಳೆಯ ವಹಿವಾಟಿಗೆ ಸಂಬಂಧಿಸಿರುವುದರಿಂದ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಬರ್ವಾನಿ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ಶುಕ್ಲಾ ತಿಳಿಸಿದರು.
ಮುಂಬೈನಲ್ಲಿ ನೋಂದಣಿಯಾಗಿರುವ ನರ್ಮದಾ ನವನಿರ್ಮಾಣ ಅಭಿಯಾನ (ಎನ್‌ಎನ್‌ಎ) ಟ್ರಸ್ಟ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನರ್ಮದಾ ಕಣಿವೆಯ ಬುಡಕಟ್ಟು ವಿದ್ಯಾರ್ಥಿಗಳಿಗೆ ವಸತಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಕಳೆದ 14 ವರ್ಷಗಳಲ್ಲಿ ವಿವಿಧ ಮೂಲಗಳಿಂದ 13.50 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಆ ಹಣವನ್ನು ರಾಜಕೀಯ, ದೇಶವಿರೋಧಿ ಕಾರ್ಯಸೂಚಿಗೆ ಬಳಸಿಕೊಂಡಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಎಫ್‌ಐಆರ್‌ನಲ್ಲಿ ಮೇಧಾ ಪಾಟ್ಕರ್, ಪರ್ವೀನ್ ರೂಮಿ ಜಹಾಂಗೀರ್, ವಿಜಯ ಚೌಹಾಣ್, ಕೈಲಾಶ್ ಅವಸ್ಯ, ಮೋಹನ್ ಪಾಟಿದಾರ್, ಆಶಿಶ್ ಮಂಡ್ಲೋಯ್, ಕೇವಲ್ ಸಿಂಗ್ ವಾಸವೆ, ಸಂಜಯ್ ಜೋಶಿ, ಶ್ಯಾಮ್ ಪಾಟೀಲ್, ಸುನೀತ್ ಎಸ್‌ಆರ್, ನೂರ್ಜಿ ಪದ್ವಿ ಮತ್ತು ಕೇಶವ್ ವಾಸವೆ ಹೆಸರಿದೆ. ಪ್ರಕರಣ ಎರಡು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ದಾಖಲೆಗಳು ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪಕ್ಷಗಳಿಗೆ ತಮ್ಮ ಪರ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.