ಥಾಣೆ (ಮಹಾರಾಷ್ಟ್ರ): ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ಬಿಜೆಪಿಎಂಎಂ ಸದಸ್ಯೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಸಚಿವ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ವಿರುದ್ಧ ಮಹಾರಾಷ್ಟ್ರದ ಮುಂಬ್ರಾದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ತಡರಾತ್ರಿ ಭಾರಿ ಜನಸಂದಣಿಯ ಲಾಭ ಪಡೆದು ಅವ್ಹಾದ್ ತನ್ನನ್ನು ಎರಡೂ ಕೈಗಳಿಂದ ಪಕ್ಕಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಿದಾ ಅಸ್ಗರ್ ರಶೀದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಬ್ರಾ ಪಟ್ಟಣದಲ್ಲಿ ನೂತನ ಸೇತುವೆ ಉದ್ಘಾಟಿಸಿದ ಬಳಿಕ ಅಲ್ಲಿಂದ ತೆರಳುತ್ತಿದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಆಗಲು ಕಾರಿನ ಹತ್ತಿರ ಹೋಗುತ್ತಿದ್ದೆ.
ಆಗ ಇದ್ದಕ್ಕಿದ್ದಂತೆ ಅವ್ಹಾದ್ ಮಧ್ಯೆ ಬಂದು, ದಾರಿಗೆ ಯಾಕೆ ಅಡ್ಡ ಬರುತ್ತಿರುವೆ? ಪಕ್ಕಕ್ಕೆ ಸರಿ ಎಂದು ಹೇಳುತ್ತ ನನ್ನೆರಡೂ ಭುಜ ಹಿಡಿದು ಪಕ್ಕಕ್ಕೆ ತಳ್ಳಿದರು ಎಂದು ರಿದಾ ಅಸ್ಗರ್ ಆರೋಪಿಸಿದ್ದಾರೆ.
ಘಟನೆಯ ನಂತರ ಮುಜುಗರಕ್ಕೀಡಾದ ರಿದಾ, ಸಿಎಂ ಶಿಂಧೆ ಅವರನ್ನು ಭೇಟಿಯಾಗಿದ್ದು, ಅವ್ಹಾದ್ ವಿರುದ್ಧ ಎಫ್ಐಆರ್ ದಾಖಲಿಸಲು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು. ಸದ್ಯ ಮುಂಬ್ರಾ ಪೊಲೀಸರು ಘಟನೆಗೆ ಸಂಬಂಧಿಸಿದಂತೆ, ಮಹಿಳೆಯ ವಿನಯಭಂಗ ಮಾಡಿದ್ದಕ್ಕಾಗಿ ಸೆಕ್ಷನ್ 354 ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿದ್ದಾರೆ.
ಆದರೆ, ತಮ್ಮ ವಿರುದ್ಧ ರಿದಾ ಅಸ್ಗರ್ ಮಾಡಿರುವ ಎಲ್ಲ ಆರೋಪಗಳನ್ನು ಅವ್ಹಾದ್ ತಳ್ಳಿಹಾಕಿದ್ದು, ಇದು ಮೂರು ದಿನಗಳಲ್ಲಿ ತಮ್ಮ ವಿರುದ್ಧ ದಾಖಲಿಸಲಾದ ಎರಡನೇ ಸುಳ್ಳು ಪ್ರಕರಣವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಹಲವಾರು ಉನ್ನತ ಎನ್‌ಸಿಪಿ ನಾಯಕರು ಅವ್ಹಾದ್ ಬೆಂಬಲಕ್ಕೆ ನಿಂತಿದ್ದಾರೆ.
ನವೆಂಬರ್ 7 ರಂದು ಥಾಣೆ ಮಾಲ್ ಮಲ್ಟಿಪ್ಲೆಕ್ಸ್‌ನಲ್ಲಿ ಮರಾಠಿ ಚಲನಚಿತ್ರ 'ಹರ್ ಹರ್ ಮಹಾದೇವ್' ಪ್ರದರ್ಶನದ ಸಂದರ್ಭದಲ್ಲಿ ನಡೆದ ಗಲಭೆಯ ಪ್ರಕರಣದ ಹಿನ್ನೆಲೆಯಲ್ಲಿ ಅವ್ಹಾದ್ ಮತ್ತು ಇತರ 10 ಜನರ ಮೇಲೆ ಹಿಂಸಾಚಾರದ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ನಟಿ ಕೇತ್ಕಿ ಬೆನ್ನಲ್ಲೇ ಬಿಜೆಪಿ ವಕ್ತಾರರಿಂದ ಶರದ್ ಪವಾರ್ ಬಗ್ಗೆ ಪೋಸ್ಟ್ : ಎನ್‌ಸಿಪಿ ಕಾರ್ಯಕರ್ತರಿಂದ ಹಲ್ಲೆ