ಹಿಸಾರ್ (ಹರಿಯಾಣ) : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಿಸಾರ್ ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣ ಸಂಬಂಧ ಮಾಜಿ ಕ್ರಿಕೆಟಿಗ ಮತ್ತು ಹರಿಯಾಣದ ಉಪ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜನವರಿ 1 ರಂದು ಹಿಸಾರ್‌ನಲ್ಲಿರುವ ತನ್ನ ಮನೆ ಖಾಲಿ ಮಾಡುವಂತೆ ಬೆದರಿಕೆ ಹಿನ್ನೆಲೆಯಲ್ಲಿ ಪವನ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಗಿಂದರ್ ಶರ್ಮಾ ಸೇರಿದಂತೆ ಇತರರ ವಿರುದ್ಧ ಮೃತನ ತಾಯಿ ಸುನೀತಾ ಜನವರಿ 2 ರಂದು ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಜೋಗಿಂದರ್ ಶರ್ಮಾ, ಅಜಯ್ಬೀರ್, ಈಶ್ವರ್ ಜಜಾರಿಯಾ, ಪ್ರೇಮ್ ಖತಿ, ಅರ್ಜುನ್ ಮತ್ತು ಹಾಕಿ ಕೋಚ್ ರಾಜೇಂದ್ರ ಸಿಹಾಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಆಸ್ತಿ ವಿಚಾರವಾಗಿ ಜಗಳ : ಹಿಸಾರ್‌ನಲ್ಲಿ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದರಿಂದ ದಾಬ್ಡಾ ಗ್ರಾಮದ 27 ವರ್ಷದ ಪವನ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಮೃತನ ತಾಯಿ ಸುನೀತಾ ದೂರಿನ ಮೇರೆಗೆ ಹಿರಿಯ ಕ್ರಿಕೆಟಿಗ ಡಿಎಸ್‌ಪಿ ಜೋಗಿಂದರ್ ಶರ್ಮಾ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತನ ತಾಯಿ ಸುನೀತಾ ನೀಡಿದ ಮಾಹಿತಿ ಪ್ರಕಾರ, "ನ್ಯಾಯಾಲಯದಲ್ಲಿ ಮನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದರಿಂದ ಪವನ್ ತುಂಬಾ ಚಿಂತಿತನಾಗಿದ್ದ. ಆದರೆ, ಆರೋಪಿಗಳು ಮನೆ ಖಾಲಿ ಮಾಡುವಂತೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದರು. ನಿರಂತರ ಬೆದರಿಕೆಗಳಿಂದ ನೊಂದ ಪವನ್ ಹೊಸ ವರ್ಷದ ಮೊದಲ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" ಎಂದು ದೂರಿದ್ದರು.
ಸದ್ಯ ಹರಿಯಾಣದ ಉಪ ಪೊಲೀಸ್ ವರಿಷ್ಠಾಧಿಕಾರಿ ಜೋಗಿಂದರ್ ಶರ್ಮಾ ಅವರು ಮಾಜಿ ಕ್ರಿಕೆಟರ್ ಆಗಿದ್ದು, 2007ರಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ನಿರ್ಣಾಯಕ ಕೊನೆಯ ಓವರ್ ಬೌಲಿಂಗ್ ಮಾಡಿದ್ದರು. ಪಾಕಿಸ್ತಾನಿ ಬ್ಯಾಟರ್ ಮಿಸ್ಬಾ ಉಲ್ ಹಕ್ ಅವರ ವಿಕೆಟ್ ಪಡೆದು, ತಂಡವು ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ :ನಟಿ ತಾರಾ ಫೇಸ್ ಬುಕ್ ಖಾತೆ ಹ್ಯಾಕ್: ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲು