ಮುಂಬೈ(ಮಹಾರಾಷ್ಟ್ರ):ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಅಜಯ್ ಪಾಟೀಲ್ ಎಂಬುವವರ ಮೇಲೆ ಠಾಕ್ರೆ ಗುಂಪಿನ ಕಾರ್ಯಕರ್ತರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಭ್ರಷ್ಟಾಚಾರದ ವಿರುದ್ಧ ಪಾಲಿಕೆ ಕಚೇರಿಯಲ್ಲಿ ನಡೆದ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಇಂಜಿನಿಯರ್ ಪಾಟೀಲ್ ಈ ಬಗ್ಗೆ ವಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಲ್ವರ ಬಂಧನ:ದೂರಿನ ಅನ್ವಯ ಶಿವಸೇನಾ (ಯುಬಿಟಿ) ನಾಯಕ ಅನಿಲ್ ಪರಬ್ ಮತ್ತು 25 ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 353, 332, 506 ಮತ್ತು 34 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಇಬ್ಬರು ಮಾಜಿ ಕಾರ್ಪೊರೇಟರ್‌ಗಳು ಮತ್ತು ಇಬ್ಬರು ಶಾಖಾ ಮುಖ್ಯಸ್ಥರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಮಾಜಿ ಕಾರ್ಪೊರೇಟರ್ ಸದಾ ಪರಬ್, ಮಾಜಿ ಕಾರ್ಪೊರೇಟರ್ ಹಾಜಿ ಹಲೀಂ ಖಾನ್, ಶಾಖಾ ಮುಖ್ಯಸ್ಥ ಸಂತೋಷ್ ಕದಂ, ಶಾಖಾ ಮುಖ್ಯಸ್ಥ ಉದಯ್ ದಳವಿ ಬಂಧಿತರು.
ಇಂಜಿನಿಯರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 13 ಮಂದಿಯನ್ನು ವಕೋಲಾ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕೆಲವರನ್ನು ಬಿಡುಗಡೆ ಮಾಡಲಾಗಿದೆ. ನಾಲ್ವರನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಕೋಲಾ ಪೊಲೀಸರು ವಿವಿಧ ತಂಡಗಳನ್ನು ರಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
353 (ಸರ್ಕಾರಿ ನೌಕರನ್ನು ಕರ್ತವ್ಯ ನಿರ್ವಹಣೆಯಿಂದ ತಡೆಯಲು ಆಕ್ರಮಣ ಅಥವಾ ಕ್ರಿಮಿನಲ್ ಬಲ) ಮತ್ತು 506-2 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಪ್ರಕರಣದ ವಿವರ:ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್, ಬಾಂದ್ರಾದಲ್ಲಿರುವ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಗುಂಪಿನ ಶಿವಸೇನಾ ಪಕ್ಷದ ಕಚೇರಿಯನ್ನು ಅನಧಿಕೃತವಾಗಿದೆ ಎಂದು ಆರೋಪಿಸಿ ಅದನ್ನು ಕೆಡವಿದ್ದರು. ಈ ವಿಚಾರವಾಗಿ ಪರಬ್ ನೇತೃತ್ವದ ನಿಯೋಗವು ಎಚ್-ಈಸ್ಟ್ ವಾರ್ಡ್ ಅಧಿಕಾರಿ ಸ್ವಪ್ನಾ ಕ್ಷೀರಸಾಗರ್ ಅವರನ್ನು ಭೇಟಿ ಮಾಡಲು ಬಿಎಂಸಿ ಕಚೇರಿಗೆ ಬಂದಿದ್ದರು.
ಪಕ್ಷದ ಕಚೇರಿಯ ಬೋರ್ಡ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಚಿತ್ರಗಳಿದ್ದರೂ ಪಕ್ಷದ ಕಚೇರಿಯನ್ನು ಕೆಡವಿದ ಅಧಿಕಾರಿಗಳನ್ನು ತಮ್ಮ ಮುಂದೆ ಹಾಜರುಪಡಿಸುವಂತೆ ಅವರು ಕೇಳಿಕೊಂಡರು. ಕೆಲವು ಪೌರ ಕಾರ್ಮಿಕರು ಮುಂದೆ ಬಂದಾಗ, ಶಿವಸೇನೆ (ಯುಬಿಟಿ) ಕಾರ್ಯಕರ್ತರು ಬಿಎಂಸಿಯ ಸಹಾಯಕ ಇಂಜಿನಿಯರ್ ಅಜಯ್ ಪಾಟೀಲ್ (42) ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿರುವುದಾಗಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಐಎಸ್ ಚಾಹಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರ ಸಿಎಂ ಠಾಕ್ರೆ ಆಪ್ತ ಅನಿಲ್ ಪರಬ್ಗೆ ಇಡಿ ನೋಟಿಸ್