ನವದೆಹಲಿ/ಬೆಳಗಳೂರು:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಏಕೈಕ ಪುತ್ರಿ ಪರಕಲಾ ವಾಂಗ್ಮಯಿ ಅವರ ವಿವಾಹ ಮಹೋತ್ಸವವೂ (ಜೂನ್ 8) ಗುರುವಾರ ಅತ್ಯಂತ ಸರಳವಾಗಿ ನೆರವೇರಿತು. ರಾಜ್ಯ ರಾಜಧಾನಿ ಬೆಂಗಳೂರಿನ ಸೀತಾರಾಮನ್ ಅವರ ಮನೆಯಲ್ಲಿ ನಡೆದ ಈ ಸರಳ ವಿವಾಹ ಮಹೋತ್ಸವದಲ್ಲಿ ಯಾವುದೇ ವಿಐಪಿಗಳು, ರಾಜಕೀಯ ಗಣ್ಯರಿಗೆ ಆಹ್ವಾನವಿರಲಿಲ್ಲ. ಗುಜರಾತ್ ಮೂಲದ ಪ್ರತೀಕ್ ಎಂಬುವರನ್ನು ವಾಂಙ್ಮಯಿ ಅವರು ಕೈ ಹಿಡಿದಿದ್ದು, ಕೆಲವೇ ಕೆಲವು ಆಪ್ತರು ಮತ್ತು ಕುಟುಂಬ ವರ್ಗದವರ ಸಮ್ಮುಖದಲ್ಲಿ ಸರಳವಾಗಿ ಬ್ರಾಹ್ಮಣ ಸಂಪ್ರದಾಯದಂತೆ ಈ ಮದುವೆ ನಡೆಯಿತು. ಮದುವೆಯಲ್ಲಿ ಪಾಲ್ಗೊಂಡವರೆಲ್ಲ ನವದಂಪತಿಗೆ ಶುಭಹಾರೈಸಿದರು.
ಪ್ರತೀಕ್ ಯಾರು: ಸಿಂಗಾಪುರದ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದ ಪದವೀಧರರಾಗಿರುವ ಪ್ರತೀಕ್ ಅವರು ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿದ್ದು, (OSD) 2014 ರಲ್ಲಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೆಲಸ ಆರಂಭಿಸಿದ್ದರು. ಅದಕ್ಕೂ ಮುನ್ನ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಮುಖ್ಯಮಂತ್ರಿ ಕಚೇರಿಯಲ್ಲಿ (CMO) ಸಂಶೋಧನಾ ಸಹಾಯಕರಾಗಿ ಕಾರ್ಯ ನಿರ್ವವಹಿಸಿದ್ದರು. 2014ರಲ್ಲಿ ಮೋದಿ ಅವರು ಪ್ರಧಾನ ಮಂತ್ರಿ ಹುದ್ದೆಗೇರಿದರು. ಆ ಬಳಿಕ 2019 ರಲ್ಲಿ ಪ್ರತೀಕ್ ಅವರಿಗೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಯಿತು. ಬಹು ಕಾಲದಿಂದ ಮೋದಿ ಅವರ ಜೊತೆ ನಿಕಟ ಸಂಬಂಧ ಹೊಂದಿರುವ ಪ್ರತೀಕ್ ದೋಷಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಸಹಾಯಕರಲ್ಲೊಬ್ಬರು ಎಂದು ಸಹ ಹೇಳಲಾಗುತ್ತಿದೆ.
ಪರಕಾಲ ವಾಂಙ್ಮಯಿ ಅವರ ಹಿನ್ನೆಲೆ:ಇನ್ನು ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ಪರಕಾಲ ವಾಂಙ್ಮಯಿ ಅವರು ಮಿಂಟ್ ಲೌಂಜ್‌ನಲ್ಲಿ ವಿಶಿಷ್ಟ ಬರಹಗಾರರಾಗಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರೆ, ಅಮೆರಿಕದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ ಎಂಎಸ್ ಪದವಿ ಕೂಡ ಪಡೆದಿದ್ದಾರೆ. ಸರಳ ವಿವಾಹ ಮಹೋತ್ಸವದಲ್ಲಿ ವಧು ಪರಕಾಲ ವಾಂಙ್ಮಯಿ ಅವರು ಗುಲಾಬಿ ಬಣ್ಣದ ಸೀರೆ, ಹಸಿರು ಬ್ಲೌಸ್ ತೊಟ್ಟು ಕಂಗೊಳಿಸಿದರೆ, ವರ ಪ್ರತೀಕ್ ಅವರು ಪಂಚೆ, ಶಾಲು ಧರಿಸಿದ್ದರು.