ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಇಂದು ಮುಕ್ತಾಯಗೊಳ್ಳುತ್ತಿದೆ. ಕೊನೆಯ ದಿನವಾದ ಇಂದು ಶ್ರೀನಗರದ ಶೇರ್ ಕಾಶ್ಮೀರ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಿಗದಿಯಾಗಿದೆ. ಕಳೆದ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 3,570 ಕಿ.ಮೀ. ದೂರ ಸಂಚರಿಸುವ ಈ ಯಾತ್ರೆಗೆ ಚಾಲನೆ ನೀಡಲಾಗಿತ್ತು. 150 ದಿನಗಳ ಬೃಹತ್ ಯಾತ್ರೆ ಇತ್ತೀಚೆಗೆ ಜಮ್ಮು ಕಾಶ್ಮೀರ ತಲುಪಿತ್ತು.
ಇಂದಿನ ಸಮಾರೋಪ ಸಮಾರಂಭದಲ್ಲಿ ಒಟ್ಟು 12 ರಾಜಕೀಯ ಪಕ್ಷಗಳು ಭಾಗವಹಿಸಲಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ 21 ಸಮಾನ ಮನಸ್ಸಿನ ವಿವಿಧ ಪಕ್ಷಗಳ ಪೈಕಿ ಕೆಲವರು ಭದ್ರತಾ ಕಾರಣಗಳಿಂದ ಈ ಕಾರ್ಯಕ್ರಮಕ್ಕೆ ಗೈರಾಗುವ ಸಾಧ್ಯತೆ ಇದೆ. ಟಿಡಿಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಮುಖಂಡರು ಈ ಸಭೆಗೆ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಯಾರೆಲ್ಲಾ ಪಾಲ್ಗೊಳ್ತಾರೆ?: ಡಿಎಂಕೆ, ಎನ್‌ಸಿಪಿ, ಜೆಡಿ(ಯು), ಆರ್‌ಜೆಡಿ, ಕೇರಳ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಕೇರಳ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ.