ಮುಂಬೈ( ಮಹಾರಾಷ್ಟ್ರ):ದಿವಂಗತ ಚಲನಚಿತ್ರ ನಿರ್ಮಾಪಕ ವಿಜಯ್ ಆನಂದ್ ಅವರ ಪತ್ನಿ ಸುಷ್ಮಾ ಆನಂದ್ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ್ ಆನಂದ್ ಅವರು 70 ನೇ ವಯಸ್ಸಿನಲ್ಲಿ 2004 ರಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಮಾಧ್ಯಮಗಳ ವರದಿ ಪ್ರಕಾರ, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸುಷ್ಮಾ ಅವರು ತಮ್ಮ ಪತಿ ನಿಧನರಾದ 19 ವರ್ಷಗಳ ನಂತರ ಆಗಸ್ಟ್ 27 ರ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕೆಟ್ನಾವ್ ಸ್ಟುಡಿಯೋದ ಮ್ಯಾನೇಜರ್ ಕುಕ್ಕೊ ಶಿವಪುರಿ ನೀಡಿದ ಮಾಹಿತಿ ಪ್ರಕಾರ, " ಕುರ್ಚಿಯ ಮೇಲೆ ಕುಳಿತಿದ್ದಾಗ ಸುಷ್ಮಾ ಇದ್ದಕ್ಕಿದ್ದಂತೆ ಕೆಳಗೆ ಉರುಳಿ ಬಿದ್ದಿದ್ದಾರೆ. ನೆಲದ ಮೇಲೆ ಬಿದ್ದಿರುವುದನ್ನು ಕಂಡ ಕುಟುಂಬಸ್ಥರು ಕೂಡಲೇ ಸ್ಥಳಕ್ಕೆ ಆಗಮಿಸಿ, ಮೇಲಕ್ಕೆತ್ತಿದ್ದಾರೆ. ಬಳಿಕ ಸುಷ್ಮಾ ಆನಂದ್ ಕುಟುಂಬಸ್ಥರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ, ಆದರೆ, ಅದು ಸಾಧ್ಯವಾಗಿಲ್ಲ ಹಾಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೂಡಲೇ ಸುಷ್ಮಾ ಅವರನ್ನು ಫ್ಯಾಮಿಲಿ ಡಾಕ್ಟರ್ ಆಗಮಿಸಿ ಪರೀಕ್ಷೆ ನಡೆಸುವಾಗ ಸಾವನ್ನಪ್ಪಿದ್ದಾರೆ " ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಯಂತ ಮಹಾಪಾತ್ರ ನಿಧನ
ಸುಷ್ಮಾ ಅವರ ಮೃತದೇಹವನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಅವರ ಅಂತಿಮ ಕ್ರಿಯೆ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಅಂತಿಮ ವಿಧಿವಿಧಾನಗಳನ್ನು ಸಾಂತಾಕ್ರೂಜ್ (ಪಶ್ಚಿಮ) ಪೊಲೀಸ್ ಠಾಣೆ ಬಳಿಯ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮೃತ ಸುಷ್ಮಾ ಅವರು ಒಬ್ಬ ಪುತ್ರ ಸೇರಿದಂತೆ ಪ್ರೀತಿ ಪಾತ್ರರು ಹಾಗೂ ಕುಟುಂಬಸ್ಥರನ್ನು ಬಿಟ್ಟು ಅಗಲಿದ್ದಾರೆ.