ರಾಂಪುರ (ಉತ್ತರ ಪ್ರದೇಶ) :ಮಾಜಿ ಸಂಸದೆ ಹಾಗೂ ಖ್ಯಾತ ಚಿತ್ರನಟಿ ಜಯಪ್ರದಾ ಅವರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಂಪುರದ ಸಂಸದ - ಶಾಸಕ ವಿಶೇಷ ನ್ಯಾಯಾಲಯ ಅವರಿಗೆ ನಾಲ್ಕನೇ ಬಾರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಈ ವಾರಂಟ್ ಜಾರಿಯಾದ ನಂತರ ಈಗ ಪೊಲೀಸರು ಅವರನ್ನು ಎಲ್ಲಿಂದಲ್ಲಾದರೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬಹುದು. 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಜಯಪ್ರದಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ರಾಂಪುರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಚುನಾವಣಾ ಪ್ರಚಾರದ ವೇಳೆ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ರಾಂಪುರದ ಸಂಸದ - ಶಾಸಕ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಪದೇ ಪದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಅವರು ವಿಚಾರಣೆಗೆ ಬರಲಿಲ್ಲ. ಇದೀಗ ನ್ಯಾಯಾಲಯದಿಂದ ಅವರ ಹೆಸರಿಗೆ ವಾರಂಟ್ ಜಾರಿಯಾಗಿದೆ. ಈ ಹಿಂದೆ ವಾರಂಟ್ ಜಾರಿಯಲ್ಲಿದ್ದರೂ ಅವರು ವಿಚಾರಣೆಗೆ ಬಾರದಿದ್ದರಿಂದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 24 ಕ್ಕೆ ನಿಗದಿಪಡಿಸಿದೆ. ಜಯಪ್ರದಾ ಅವರೇ ನ್ಯಾಯಾಲಯಕ್ಕೆ ಹಾಜರಾಗಬೇಕು ಅಥವಾ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಈ ವಿಷಯವಾಗಿ ಪ್ರಾಸಿಕ್ಯೂಷನ್ ಅಧಿಕಾರಿ ನೀರಜ್ ಕುಮಾರ್ ಅವರು ಮಾತನಾಡಿ, 2019 ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪ್ರದಾ ಅವರ ಪ್ರಕರಣವು ವಿಶೇಷ ನ್ಯಾಯಾಲಯದಲ್ಲಿದೆ ಎಂದು ಹೇಳಿದ್ದಾರೆ.