ನವದೆಹಲಿ:ಅಮೆರಿಕದ ದೂತಾವಾಸದ ಮೇಲೆ ದಾಳಿ ಮಾಡಲು ಯತ್ನಿಸಿದ ಖಲಿಸ್ತಾನಿ ಪರ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ದೆಹಲಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತದ ರಾಯಭಾರಿ ಕಚೇರಿ ಧ್ವಂಸಕ್ಕೆ ಸಂಚು ರೂಪಿಸಿದವರ ಪಾಸ್‌ಪೋರ್ಟ್ ರದ್ದು ಮತ್ತು ಕಾನೂನಿನಡಿ ಶಿಕ್ಷೆ ವಿಧಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಎಂಬುವರು ಅರ್ಜಿ ಸಲ್ಲಿಸಿದ್ದಾರೆ.
ಅಮೆರಿಕದ ವಾಷಿಂಗ್ಟನ್ನಲ್ಲಿರುವ ದೂತಾವಾಸದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಮತ್ತು ಕಚೇರಿ ಸಿಬ್ಬಂದಿಗೆ ಪ್ರತಿಭಟನಾಕಾರರು ನಿಂದಿಸಿ, ಬೆದರಿಕೆ ಹಾಕಲಾಗಿದೆ. ಪ್ರತಿಭಟನಾಕಾರರು ರಾಯಭಾರಿ ಕಚೇರಿ ಧ್ವಂಸ ಮಾಡಲು ಯತ್ನಿಸಿದ್ದರು. ಇದಲ್ಲದೇ, ಭಾರತೀಯ ಪತ್ರಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಲಾಗಿದೆ. ಭಾರತದ ಒಕ್ಕೂಟದ ವಿರುದ್ಧ ಘೋಷಣೆ ಕೂಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಖಲಿಸ್ತಾನಿ ಪರ ಪ್ರತಿಭಟನಕಾರರ ಕೃತ್ಯ ಮತ್ತು ಹೇಳಿಕೆಗಳು ಪ್ರಚೋದನಕಾರಿಯಾಗಿವೆ. ಇದು ಭಾರತದಲ್ಲಿ ದ್ವೇಷವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ. ಸರ್ಕಾರದ ವಿರುದ್ಧ ಹೋರಾಡಲು ಜನರನ್ನು ಎತ್ತಿಕಟ್ಟುವ ಕೆಲಸವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಾಸ್‌ಪೋರ್ಟ್ ರದ್ದತಿಗೆ ಆಗ್ರಹ:ಭಾರತದ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ ಪ್ರತಿಭಟನಾಕಾರರಲ್ಲಿ ಹೆಚ್ಚಿನವರು ಭಾರತೀಯ ನಾಗರಿಕರು ಮತ್ತು ಭಾರತೀಯ ಪಾಸ್‌ಪೋರ್ಟ್‌ಗಳನ್ನು ಅವರು ಹೊಂದಿದ್ದಾರೆ. ಇದು ಭಾರತದ ಕಾನೂನಿನ ಪ್ರಕಾರ ಗಂಭೀರ ಸ್ವರೂಪದ ಆರೋಪವಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾನೂನಿನ ಪ್ರಕಾರ ಪಾಸ್‌ಪೋರ್ಟ್ ರದ್ದುಗೊಳಿಸುವ ಮೂಲಕ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ದೆಹಲಿ ಪೊಲೀಸರಿಗೆ ಮನವಿ ಮಾಡಲಾಗಿದೆ.
ಏನಾಗಿತ್ತು?:ಎರಡು ದಿನಗಳ ಹಿಂದೆ (ಮಾರ್ಚ್ 25 ರಂದು) ಖಲಿಸ್ತಾನಿ ಪರ ಪ್ರತಿಭಟನಾಕಾರರ ಗುಂಪು ಭಾರತ ಮತ್ತು ಸರ್ಕಾರದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು. ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರನ್ನು ನಿಂದಿಸಿ ಮತ್ತು ಬೆದರಿಕೆ ಹಾಕಿದ್ದರು. ದೂತಾವಾಸ ಕಚೇರಿಯ ಕಿಟಕಿಗಳನ್ನು ಹೊಡೆದು ಹಾಕಿ, ಕಚೇರಿ ಒಳಗೆ ನುಗ್ಗಿರಿ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಲಾಗಿತ್ತು. ಕೆಲವು ಪ್ರತಿಭಟನಾಕಾರರು ಹಿಂಸಾಚಾರ ಮತ್ತು ಭಾರತೀಯ ರಾಯಭಾರ ಕಚೇರಿಯ ಧ್ವಂಸಕ್ಕೆ ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಖಲಿಸ್ತಾನಿ ಪ್ರತಿಭಟನಾಕಾರರಲ್ಲಿ ಒಬ್ಬ ಪ್ರಚೋದನಾತ್ಮಕ ಭಾಷಣ ಮಾಡುತ್ತಿರುವುದೂ ಇದೆ.
ಪತ್ರಕರ್ತನ ನಿಂದನೆ, ಹಲ್ಲೆ:ಖಲಿಸ್ತಾನಿ ಪರ ಪ್ರತಿಭಟನಾಕಾರರು ರಾಯಭಾರಿ ಕಚೇರಿ ಮುಂಭಾಗ ಜಮಾಯಿಸಿ ದಾಂಧಲೆ ನಡೆಸುತ್ತಿದ್ದರು. ಇದನ್ನು ವರದಿ ಮಾಡುತ್ತಿದ್ದ ಭಾರತೀಯ ಪತ್ರಕರ್ತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಅಲ್ಲದೇ, ಖಲಿಸ್ತಾನಿ ಧ್ವಜ ಕಟ್ಟಿದ್ದ ಕೋಲುಗಳಿಂದ ಹಲ್ಲೆ ಕೂಡ ಮಾಡಲಾಗಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಪತ್ರಕರ್ತನಿಗೆ ಮುತ್ತಿಗೆ ಹಾಕಿದ ಆಕ್ರೋಶಭರಿತ ಪ್ರತಿಭಟನಾಕಾರರು ಇದನ್ನು ಏನೆಂದು ವರದಿ ಮಾಡುವೆ ಎಂದು ಪ್ರಶ್ನಿಸಿ ಬೆದರಿಕೆ ಹಾಕಲಾಗಿದೆ.
ಇದನ್ನೂ ಓದಿ:2ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಸಂಕಲ್ಪ ಸತ್ಯಾಗ್ರಹ: ಕಪ್ಪು ಬಟ್ಟೆ ಧರಿಸಿ ಲೋಕಸಭೆಗೆ ಹಾಜರಾಗಲು ನಿರ್ಧಾರ