ಪಾಟ್ನಾ (ಬಿಹಾರ): ಕೇಂದ್ರದ ಆಡಳಿತರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಾಗಬೇಕು. ಪ್ರತಿಪಕ್ಷಗಳು ಒಂದುಗೂಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 100 ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕೆಂದು ಜೆಡಿಯು ಹಿರಿಯ ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.
ಬಿಹಾರದ ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ಸಿಪಿಐ-ಎಂ ಪಕ್ಷದ 11ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಸಿಎಂ ನಿತೀಶ್, 'ನಾವು ಬಯಸುತ್ತಿದ್ದೇವೆ. ನೀವು (ಕಾಂಗ್ರೆಸ್) ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು. ನಿಮ್ಮ ಪಕ್ಷದ ನೇತೃತ್ವವನ್ನು ನಾವು ಅನುಮೋದನೆ ಮಾಡುತ್ತೇವೆ. ಆದಷ್ಟು ಬೇಗ ನಿರ್ಧಾರ ತೆಗೆದುಕೊಂಡು ನಮ್ಮೆಲ್ಲರೆನ್ನೂ ಕರೆದು ಮಾತುಕತೆ ನಡೆಸಿ. ಎಲ್ಲೆಲ್ಲಿ, ಯಾವ ಪಕ್ಷದ ಜೊತೆಗೆ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕೆಂದು ತೀರ್ಮಾನಿಸಿ' ಎಂದು ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರಿಗೆ ಒತ್ತಾಯಿಸಿದರು.
ಮುಂದುವರೆದು, 'ನಾವು ಮಾತುಕತೆ ನಡೆಸಿದ ದಿನವೇ ಎಲ್ಲರೂ ಒಟ್ಟುಗೂಡಬೇಕು. ನೀವು (ಕಾಂಗ್ರೆಸ್) ಬೇಗ ಆಲೋಚನೆ ಮಾಡಿ ತಿಳಿಸಿ. ನೀವು ನನ್ನ ಸಲಹೆಯನ್ನು ಅನುಸರಿಸಿ, ಎಲ್ಲ ಪತಿಪಕ್ಷಗಳು ಒಟ್ಟಾಗಿ ಹೋರಾಡಿದರೆ, ಅವರ (ಬಿಜೆಪಿ) ಸ್ಥಾನಗಳು 100ಕ್ಕಿಂತ ಕಡಿಮೆಗೆ ಕುಸಿಯುತ್ತವೆ ಎಂದು ನಿತೀಶ್ ಹೇಳಿದರು. ಇದೇ ವೇಳೆ 'ನೀವು ನನ್ನ ಸಲಹೆ ಅನುಸರಿಸದೇ ಹೋದರೆ, ಏನಾಗುತ್ತದೆ ಎಂಬುವುದೂ ನಿಮಗೆ ತಿಳಿದಿದೆ. ನಾವು ಕೂಡ ಕೆಲ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ದೇಶದಲ್ಲಿ ಹಿತದಲ್ಲಿ ಆಲೋಚನೆ ಮಾಡಿ. ಇದರಿಂದ ನಿಮಗೂ (ಕಾಂಗ್ರೆಸ್) ಅನುಕೂಲವಾಗಲಿದೆ ಹಾಗೂ ದೇಶಕ್ಕೂ ಅನುಕೂಲವಾಗಲಿದೆ' ಎಂದು ಬಿಹಾರ ಸಿಎಂ ತಿಳಿಸಿದರು.