ಹೈದರಾಬಾದ್, ತೆಲಂಗಾಣ :ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಹೈದರಾಬಾದ್‌ನಲ್ಲಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಕೆಲ ಪೊಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾಗಿವೆ.
ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್ನ ಕರ್ಮಾನ್ಘಾಟ್ ಗೋರಕ್ಷಕ ಸೇವಾ ಸಮಿತಿಯ ಸದಸ್ಯರು ಟಿಕೆಆರ್ ಕಮಾನ್ ಬಳಿ ವಾಹನವೊಂದನ್ನು ತಡೆದಿದ್ದರು. ಈ ವೇಳೆ ವಾಹನದಲ್ಲಿದ್ದವರು ಮತ್ತು ಗೋರಕ್ಷಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಕಲ್ಲು ತೂರಾಟ, ಪರಸ್ಪರ ಘರ್ಷಣೆ ಸಂಭವಿಸಿದೆ. ಗೋವುಗಳ ಕಳ್ಳಸಾಗಣೆ ಆರೋಪ ಹೊತ್ತವರು, ಕೆಲವು ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ಗೋ ರಕ್ಷಕರ ಮೇಲೆ ಕಬ್ಬಿಣದ ರಾಡ್ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ.
ಹೈದರಾಬಾದ್ನ ಕರ್ಮಾನ್ಘಾಟ್ ಉದ್ವಿಗ್ನ ಈ ವೇಳೆ ತಮ್ಮನ್ನು ತಾವು ಕಾಪಾಡಿಕೊಳ್ಳಲು ಗೋರಕ್ಷಕರು, ಹತ್ತಿರದಲ್ಲಿಯೇ ಇದ್ದ ಹನುಮಾನ್ ದೇವಾಲಯಕ್ಕೆ ನುಗ್ಗಿದ್ದು, ಆರೋಪಿಗಳು ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಂತರ ಗೋರಕ್ಷಕ ಸೇವಾ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ, ಪ್ರತಿಭಟನೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಆರಂಭವಾದ ಪ್ರತಿಭಟನೆ ಬುಧವಾರ ಮಧ್ಯಾಹ್ನ 3 ಗಂಟೆಯವರೆಗೆ ನಡೆದಿದೆ.
ಟ್ರಾಫಿಕ್ ಜಾಮ್, ಲಾಠಿಚಾರ್ಜ್ :ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದ ಕಾರಣಕ್ಕೆ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಮತ್ತು ಅಲ್ಲಿದ್ದ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಹಲವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೆಲವರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇಬ್ಬರು ಪೊಲೀಸರಿಗೆ ಗಾಯವಾಗಿದೆ. ಲಾಠಿ ಚಾರ್ಜ್ ವೇಳೆ ಹಲವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಲೂಡೋಗಾಗಿ ರೈಲಿನಲ್ಲೇ ಲಡಾಯಿ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಲವು ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಿದ ನಂತರ ಉದ್ವಿಗ್ನತೆ ಕಡಿಮೆಯಾಗಿದೆ. ಹೆಚ್ಚಿನ ಯುವಕರನ್ನು ಬಂಧಿಸಿ ಮೀರ್‌ಪೇಟ್ ಮತ್ತು ಸರೂರ್‌ನಗರ ಪೊಲೀಸ್ ಸ್ಟೇಷನ್ಗೆ ಸ್ಥಳಾಂತರ ಮಾಡಲಾಗಿದೆ. ಹೆಚ್ಚುವರಿ ಪಡೆಗಳ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಡಿಜಿಪಿ ಎಚ್ಚರಿಕೆ : ಈ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಲವು ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತವೆ. ಈ ಸುಳ್ಳು ಸುದ್ದಿಯನ್ನ ಯಾರೂ ಹರಿಬಿಡಬಾರದು. ಒಂದು ವೇಳೆ ಸುಳ್ಳು ಸುದ್ದಿ ಹರಿಬಿಟ್ಟರೆ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಎಚ್ಚರಿಕೆ ರವಾನಿಸಿದ್ದಾರೆ.