ಶಿಮ್ಲಾ: ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮತ್ತು ವಿದ್ಯಾರ್ಥಿ ಫೆಡರೇಶನ್ ಆಫ್ ಇಂಡಿಯಾ (SFI) ವಿದ್ಯಾರ್ಥಿಗಳ ನಡುವೆ ಮತ್ತೊಮ್ಮೆ ಘರ್ಷಣೆ ನಡೆದಿದೆ.
ವಿಶ್ವವಿದ್ಯಾಲಯದ ಪಿಂಕ್ ಪಟೇಲ್ ಚೌಕ್ನಲ್ಲಿ ಎರಡು ಸಂಘಟನೆಗಳ ನಡುವೆ ವಾಗ್ವಾದ ಆರಂಭವಾಯಿತು. ಸ್ವಲ್ಪ ಸಮಯದ ನಂತರ, ವಾಗ್ವಾದವು ಗಲಾಟೆಯಾಗಿ ಮಾರ್ಪಟ್ಟಿತು ಮತ್ತು ಪೊಲೀಸರ ಮುಂದೆಯೇ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ABVP-SFI ವಿದ್ಯಾರ್ಥಿಗಳ ನಡುವೆ ಘರ್ಷಣೆ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಎರಡೂ ಗುಂಪುಗಳ ನಡುವಣ ಜಗಳ ಬಿಡಿಸಲು ಸಾಧ್ಯವಾಗಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ಆರಂಭವಾಗಿವೆ. ಗಲಾಟೆಯ ನಂತರ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಆದ ಕಾರಣ ಪರಿಸ್ಥಿತಿ ಹತೋಟಿಗೆ ತರಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಡಿಎಸ್‌ಪಿ ಹೆಡ್ ಕ್ವಾರ್ಟರ್ ಕಮಲ್ ವರ್ಮಾ ಹೇಳುವಂತೆ, ಸ್ಥಳದಲ್ಲಿದ್ದ ಪೊಲೀಸರು ಎರಡೂ ಗುಂಪುಗಳನ್ನು ಸಮಾಧಾನಪಡಿಸಿದ್ದಾರೆ. ಇಲ್ಲಿಯವರೆಗೆ, ಈ ವಿಷಯದಲ್ಲಿ ಯಾವುದೇ ಕಡೆಯಿಂದ ದೂರು ಬಂದಿಲ್ಲ.
ಎರಡು ಗುಂಪುಗಳ ನಡುವಿನ ವಾಗ್ವಾದದ ಹಿಂದಿನ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ, ಕಾರ್ಯಕರ್ತರು ಈ ರೀತಿ ಪರಸ್ಪರ ಘರ್ಷಣೆ ನಡೆಸಿರುವುದು ಹೊಸ ವಿಷಯವಲ್ಲ. ಇದಕ್ಕೂ ಮುಂಚೆಯೇ, HPU ನಲ್ಲಿ ಅನೇಕ ಬಾರಿ ಪರಸ್ಪರ ಘರ್ಷಣೆಗಳು ನಡೆದಿವೆ ಎಂದು ತಿಳಿದು ಬಂದಿದೆ.