ಪಿಲಿಭಿತ್:ನಿರುದ್ಯೋಗ, ಭ್ರಷ್ಟಾಚಾರ ಮತ್ತು ಹಣದುಬ್ಬರ ಸಮಸ್ಯೆಗಳು ನಿವಾರಣೆಯಾಗುವವರೆಗೂ ಅವುಗಳ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ಹೇಳಿದ್ದಾರೆ. ಸ್ವಪಕ್ಷದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ವರುಣ್, ಮಕ್ಕಳು ಮತ್ತು ಯುವಕರಿಗೆ ಗೌರವದ ಜೀವನ ಸಿಗುವಂಥ ಮತ್ತು ಸಹಾಯಕ್ಕಾಗಿ ಯಾರೂ ತಲೆ ಬಾಗಿಸುವ ಅನಿವಾರ್ಯತೆ ಇರದ ಭಾರತಕ್ಕಾಗಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಸ್ವಪಕ್ಷದ ವಿರುದ್ಧ ವರುಣ್ ಗಾಂಧಿ ಮತ್ತೆ ವಾಗ್ದಾಳಿ: ನಿರುದ್ಯೋಗ ಪ್ರಸ್ತಾಪಿಸಿದ ಸಂಸದ - ಸ್ವಪಕ್ಷದ ವಿರುದ್ಧ ವರುಣ್ ಗಾಂಧಿ ಮತ್ತೆ ವಾಗ್ದಾಳಿ
ಸ್ವಪಕ್ಷದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸಂಸದ ವರುಣ್ ಗಾಂಧಿ. ಬೆಲೆಯೇರಿಕೆ, ನಿರುದ್ಯೋಗ ನಿವಾರಣೆಗಾಗಿ ನಿರಂತರವಾಗಿ ಹೋರಾಡುತ್ತೇನೆ ಎಂದ ವರುಣ್.
ಈ ದೇಶದಲ್ಲಿ ನಿರುದ್ಯೋಗವು ನಿವಾರಣೆಯಾಗುವವರೆಗೆ ಮತ್ತು ನಿಮ್ಮ ಮಕ್ಕಳಿಗೆ ಕೆಲಸ ಸಿಗುವವರೆಗೆ ನನ್ನ ಸಂಘರ್ಷ ಮುಂದುವರಿಯುತ್ತದೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು. ನಮ್ಮ ಪೂರ್ವಜರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಜನರು ಮೂಲಭೂತ ಸಮಸ್ಯೆಗಳು, ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ ಎಂದು ಅವರು ತಿಳಿಸಿದರು.
ತಮ್ಮ ಪಿಲಿಭಿತ್ ಪ್ರವಾಸದ ಸಮಯದಲ್ಲಿ ವರುಣ್ ಗಾಂಧಿ, 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಒಳಾಂಗಣ ಕ್ರೀಡಾ ಸಭಾಂಗಣವನ್ನು ಉದ್ಘಾಟಿಸಿದರು ಮತ್ತು ನಗರ ಸ್ಥಳೀಯ ಸಂಸ್ಥೆಯ ಸದಸ್ಯರೊಂದಿಗೆ ಸಂವಾದ ನಡೆಸಿದರು.