ಅಲಪ್ಪುಜ: ಕೇರಳದ ಅಲಪ್ಪುಜ ಜಿಲ್ಲೆಯಲ್ಲಿ ಹದಿನೈದು ವರ್ಷದ ಬಾಲಕನನ್ನು ಇರಿದು ಕೊಲೆ ಮಾಡಲಾಗಿದೆ. ವಿಷು ದಿನದಂದು ಪಾದಯಾನಿವೆಟ್ಟೊಮ್ ದೇವಾಲಯದ ಉತ್ಸವದ ಸಂದರ್ಭದಲ್ಲಿ ಕಾಯಂಕುವಂ ವಲ್ಲಿಕುನ್ನಂ ಮೂಲದ ಅಭಿಮನ್ಯು ಎಂಬಾತನನ್ನು ಹತ್ಯೆ ಮಾಡಲಾಗಿದೆ.
ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಅಭಿಮನ್ಯುವನ್ನು ನಾಲ್ಕು ಜನರ ಗುಂಪು ಕೊಂದಿರುವುದಾಗಿ ತಿಳಿದು ಬಂದಿದೆ. ಆರೆಸ್ಸೆಸ್ ಸದಸ್ಯರು ಅಭಿಮನ್ಯುವನ್ನು ಹತ್ಯೆ ಮಾಡಿದ್ದಾರೆ ಎಂದು ಸಿಪಿಎಂ ಆರೋಪಿಸಿದ್ದು, ಇಂದು ವಲ್ಲಿಕುನ್ನಂನಲ್ಲಿ ಪ್ರತಿಭಟನೆಯನ್ನೂ ಮಾಡಿದೆ. ವರದಿಗಳ ಪ್ರಕಾರ, ದುಷ್ಕರ್ಮಿಗಳ ತಂಡ ಅಭಿಮನ್ಯುವಿನ ಸಹೋದರನನ್ನು ಹುಡುಕಿಕೊಂಡು ಬಂದಿತ್ತು. ಈ ವೇಳೆ ಗಲಾಟೆ ನಡೆದು, ಅಭಿಮನ್ಯುವನ್ನು ಹತ್ಯೆ ಮಾಡಲಾಗಿದೆ.
ಈ ನಡುವೆ, ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಗುರುತಿಸಿದ್ದಾರೆ ಮತ್ತು ಪ್ರಕರಣದಲ್ಲಿ ಸಂಬಂಧ ಹೊಂದಿರುವ ಆರೋಪಿಯ ಇಬ್ಬರು ಸಂಬಂಧಿಕರನ್ನು ವಶಕ್ಕೆ ಪಡೆದಿದ್ದಾರೆ. ಘರ್ಷಣೆ ನಡೆದು ಸಂಜಯ್ ದತ್ತ್ ಎಂಬಾತ ಅಭಿಮನ್ಯುವನ್ನು ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದು, ಈತ ಆರ್ಎಸ್ಎಸ್ ಯುವ ಮೋರ್ಚಾ ಕಾರ್ಯಕರ್ತ ಎನ್ನಲಾಗಿದೆ. ಸಜಯ್ ಸಹೋದರ ಮತ್ತು ತಂದೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಓದಿ : ತಲೆ ಕಡಿದು ಕಾಲಿನ ಬಳಿ ಇಟ್ಟು ಕ್ರೂರತನ ಮೆರೆದ ಏಳು ಆರೋಪಿಗಳ ಬಂಧನ
ಇದು ರಾಜಕೀಯ ಪ್ರೇರಿತ ಕೊಲೆಯೇ ಎಂಬುವುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಇದು ರಾಜಕೀಯ ಕೊಲೆಯೇ ಎಂಬುವುದುನ್ನು ಪ್ರಾಥಮಿಕ ತನಿಖೆ ಮುಗಿದ ಬಳಿಕವಷ್ಟೆ ಖಚಿತಪಡಿಸಿಲು ಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ.