ಚೆನ್ನೈ (ತಮಿಳುನಾಡು): ಭಾರತದ 18 ವರ್ಷದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಗ್ನಾನಂದನ್ ಅವರು ಫಿಡೆ ಚೆಸ್ ವಿಶ್ವಕಪ್ 2023ರಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈಗ ಅವರು ಪ್ರಶಸ್ತಿಗಾಗಿ ವಿಶ್ವದ ನಂ.1 ಮತ್ತು ಮಾಜಿ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಜೊತೆ ಸೆಣಸಾಡಲಿದ್ದಾರೆ.
ಟೈ-ಬ್ರೇಕ್ಗಳ ನಂತರ ಭಾರತದ ಈ ಪ್ರತಿಭೆ ಫ್ಯಾಬಿಯಾನೊ ಕರುವಾನಾ ಅವರನ್ನು 3.5 - 2.5 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಮೊದಲ ಎರಡು ಟೈ-ಬ್ರೇಕ್ ಪಂದ್ಯಗಳನ್ನು ಡ್ರಾ ಮಾಡಿಕೊಂಡ ನಂತರ, ಪ್ರಗ್ನಾನಂದನ್, ಕರುವಾನಾ ಅವರನ್ನು ರೇಟಿಂಗ್ ಮೂಲಕ ಪರಾಭವಗೊಳಿಸಿದರು. ಭಾನುವಾರ ನಡೆದ ಆರ್.ಪ್ರಗ್ನಾನಂದನ್ ಮತ್ತು ವಿಶ್ವದ 3ನೇ ಶ್ರೇಯಾಂಕದ ಕರುವಾನಾ ನಡುವಿನ ಪಂದ್ಯವು 47 ನಡೆಗಳಲ್ಲಿ ಕೊನೆಗೊಂಡಿತ್ತು. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಜಯ ಗಳಿಸಿದ್ದ ಕಾರ್ಲ್ಸನ್, ನಂತರ ಅಜೆರ್ಬೈಜಾನ್ ಆಟಗಾರ ನಿಜಾತ್ ಅಬಾಸೊವ್ ವಿರುದ್ಧ 74 ನಡೆಗಳಲ್ಲಿ ಡ್ರಾ ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ನಾರ್ವೆಯ ಸೂಪರ್ ಸ್ಟಾರ್ ವಿಶ್ವಕಪ್ ಫೈನಲ್ಗೆ ಪ್ರವೇಶಿಸಿದ್ದು ಇದೇ ಮೊದಲು.