ಕೋಯಿಕೋಡ್ (ಕೇರಳ): ಇಲಿ ಎಂದರೆ ಒಬ್ಬೊಬ್ಬರಿಗೆ ಒಂದೊಂದು ಥರ ಭಾವನೆ. ಕೆಲವರಿಗೆ ಅದೊಂದು ಜೀವಿ, ಇನ್ನೂ ಕೆಲವರಿಗೆ ಗಣೇಶನ ವಾಹನ, ಮತ್ತೆ ಸ್ವಲ್ಪ ಜನರಿಗೆ ಅದೆಂದರೆ ಭಯ. ಆದರೆ ಕೇರಳದ ಈ ವ್ಯಕ್ತಿಗೆ ಇಲಿ ಎಂದರೆ ಆದಾಯದ ಮಾರ್ಗ.
ಹೌದು, ಅಚ್ಚರಿಯಾದರೂ ಇದು ಸತ್ಯ. ಕೇರಳದ ವೆಲ್ಲಿಲವಾಯಲ್ ಮೂಲದ ಫಿರೋಜ್ ಖಾನ್ ಇಲಿಗಳನ್ನೇ ಆದಾಯದ ಮೂಲವಾಗಿಸಿಕೊಂಡು ಗಮನ ಸೆಳೆದಿದ್ದಾರೆ.
ಇಲಿಗಳ ಸಾಕಿ ಆದಾಯ ಮೂಲ ಕಂಡುಕೊಂಡ ಕೃಷಿಕ ವಿವಿಧ ಬಣ್ಣಗಳಲ್ಲಿ 1000ಕ್ಕೂ ಹೆಚ್ಚು ಇಲಿಗಳು ಇವರ ಮನೆಯಲ್ಲಿವೆ. ಬಿಳಿ, ಕಪ್ಪು, ಕಂದು, ಬೂದು ಬಣ್ಣದ ಇಲಿಗಳು ಪಂಜರಗಳಲ್ಲಿ ಬೆಳೆಯುತ್ತಿವೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಮಡಕೆಗಳನ್ನು ಫಿರೋಜ್ ಮನೆಯ ಟೆರೇಸ್‌ನಲ್ಲಿಟ್ಟಿದ್ದಾರೆ. ಇವುಗಳಿಗೆ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರವಾಗಿ ನೀಡುತ್ತಾರೆ.
ಫಿರೋಜ್ ಚಿಕ್ಕ ವಯಸ್ಸಿನಿಂದಲೇ ಪ್ರಾಣಿಗಳನ್ನು ಪ್ರೀತಿಸುತ್ತಿದ್ದರು. ಕೇವಲ 8 ವರ್ಷ ವಯಸ್ಸಿನವರಿದ್ದಾಗ ಅಲಂಕಾರಿಕ ಮೀನುಗಳನ್ನು ಸಾಕಿದ್ದಾರೆ. ನಂತರ ಅವರು ಪಕ್ಷಿಗಳು, ಮೊಲಗಳು, ಕ್ವಿಲ್ಸ್ ಕೋಳಿಗಳು, ಬಾತುಕೋಳಿಗಳು ಮತ್ತು ಬೆಕ್ಕುಗಳನ್ನು ಸಾಕಲು ಪ್ರಾರಂಭಿಸಿದರು. ಬಳಿಕ ವಿಭಿನ್ನವಾದದ್ದನ್ನು ಮಾಡಲು ಬಯಸಿದರು. ಆಗ ಅವರಿಗೆ ಹೊಳೆದದ್ದು ಈ ಇಲಿ ಫಾರ್ಮಿಂಗ್.
ಫಿರೋಜ್ ಸ್ನೇಹಿತರೊಬ್ಬರು ವಿದೇಶದಿಂದ ತಂದ ಕೆಲವು ಇಲಿಗಳನ್ನು ನೀಡಿದರು. ಅಲ್ಲಿಂದ ಫಿರೋಜ್ಗೆ ಇಲಿಗಳ ಮೇಲೇ ಪ್ರೀತಿ ಪ್ರಾರಂಭವಾಯಿತು. ಇದರ ವಾಣಿಜ್ಯ ಮೌಲ್ಯವನ್ನು ಅರ್ಥಮಾಡಿಕೊಂಡ ಅವರು ಅಲಂಕಾರಿಕ ಇಲಿ ಸಾಕಾಣಿಕೆಯಲ್ಲಿ ತೊಡಗಿಕೊಂಡರು.
ಅವರ ಪತ್ನಿ ಜಸೀಲಾ ಮತ್ತು ಪುತ್ರರಾದ ಶಾಹುಲ್ ಖಾನ್ ಮತ್ತು ಶಹಾಬಾಸ್ ಖಾನ್ ಸಹ ಫಿರೋಜ್ ಇಲಿ ಫಾರ್ಮ್ನಲ್ಲಿ ಸಹಾಯ ಮಾಡುತ್ತಿದ್ದಾರೆ. ಇಲಿಗಳ ಗರ್ಭಾವಸ್ಥೆಯ ಅವಧಿ 19 ರಿಂದ 21 ದಿನಗಳವರೆಗೆ ಇರುತ್ತದೆ. ಪ್ರತಿ ಹೆರಿಗೆಯಲ್ಲಿ ಇಲಿಗಳು 8 ರಿಂದ 21 ಶಿಶುಗಳಿಗೆ ಜನ್ಮ ನೀಡುತ್ತವೆ. ತನ್ನಿಂದ ಇಲಿಗಳನ್ನು ಸಾಕುಪ್ರಾಣಿಗಳಾಗಿ ಖರೀದಿಸುವವರಿಗೆ ಫಿರೋಜ್ ಅರ್ಧ ಗಂಟೆಯ ತರಬೇತಿಯನ್ನು ಸಹ ನೀಡುತ್ತಾರೆ.
ಇಲಿ ಫಾರ್ಮ್ ನಡೆಸುತ್ತಿರುವ ಫಿರೋಜ್ ಈ ಬಗ್ಗೆ ಅನುಭವಗಳನ್ನು ವಿವರಿಸುವ ಎರಡು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ. ಈಗ ಅವರ ಮೂರನೆಯ ಪುಸ್ತಕ 'ಅನ್ನಮ್ ನಲ್ಕುಮ್ ಒಮಾನಕಲ್’ ಸಹ ಸಿದ್ಧವಾಗಿದೆ. ಅವರು ತಮ್ಮ ಕೃಷಿ ಅನುಭವಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ಖಾನ್ಸ್ ಹೋಮ್ ಪೆಟ್ ಎಂಬ ಯೂಟ್ಯೂಬ್ ಚಾನಲ್ ಅನ್ನು ಸಹ ಹೊಂದಿದ್ದಾರೆ.