ಕೋಲ್ಕತ್ತಾ(ಪಶ್ಚಿಮ ಬಂಗಾಳ): ಇಂದಿನ ಮಹಿಳೆಯರು ವಿವಿಧ ರೀತಿಯ ಸಾಮಾಜಿಕ ಸಂಕೋಲೆಗಳನ್ನು ಕಳಚಿ ಸ್ವತಂತ್ರ ಮನೋಭಾವದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಪುರುಷರು ಮಾಡುವ ಹಲವು ಕೆಲಸಗಳನ್ನು ಮಾಡುವ ಮೂಲಕ ತಾವು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಧಿಸಿ, ಸಾಬೀತುಪಡಿಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಸಿಕ್ಕಿದೆ.
ಕೋಲ್ಕತ್ತಾ ಮೂಲದ ಬಿ.ಟೆಕ್ (ಎಲೆಕ್ಟ್ರಿಕಲ್) ಪದವೀಧರೆ ದೀಪ್ತಾ ಘೋಷ್ ಅವರು ರಾಜ್ಯದ ಮೊದಲ ಮಹಿಳಾ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಮಹಿಳಾ ಕ್ಯಾಬ್ ಚಾಲಕಿಯ ಹೃದಯಸ್ಪರ್ಶಿ ಕಥೆಯನ್ನು ಫೇಸ್‌ಬುಕ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಮಹಿಳಾ ಉಬರ್ ಚಾಲಕಿಯನ್ನು ಭೇಟಿಯಾದ ಪರಮ್ ಕಲ್ಯಾಣ್ ಸಿಂಗ್ ಎಂಬುವವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆಕೆಯ ಜತೆಗಿನ ಕೆಲ ಅನುಭವವನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಅಪರೂಪದ ಮಹಿಳಾ ಕ್ಯಾಬ್ ಡ್ರೈವರ್ ಅನ್ನು ಭೇಟಿಯಾಗಿರುವುದಾಗಿ ಅವರು ತಿಳಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಡ್ರೈವರ್ ಅನುಭವ ಹಾಗೂ ಆಕೆಯ ವಿವರ ಜತೆಗೆ ಆಕೆಯ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ.
ಪರಮ್ ಕಲ್ಯಾಣ್ ಸಿಂಗ್ ಉಬರ್ ಬುಕ್ ಮಾಡಿದ್ದರು. ಪಿಕಪ್ ಮಾಡಿಕೊಳ್ಳಲು ಚಾಲಕನಿಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಹಿಳೆ ಪ್ರತಿಕ್ರಿಯಿಸಿದ್ದನ್ನು ಕೇಳಿ ಒಂದು ಕ್ಷಣ ಆಶ್ಚರ್ಯ ಚಕಿತರಾಗಿದ್ದಾರೆ. ಏಕೆಂದರೆ ಅವರು ಕ್ಯಾಬ್ ಚಾಲಕಿಯನ್ನು ನೋಡಿರುವುದು ಇದೇ ಮೊದಲು. ಈ ಮಹಿಳಾ ಚಾಲಕಿಯ ಬಗ್ಗೆ ಪೋಸ್ಟ್‌ನಲ್ಲಿ ವಿವರಿಸಿರುವ ಪರಮ್, ಉಬರ್ ಇಂಡಿಯಾದ ಮಹಿಳಾ ಡ್ರೈವರ್ ಹೆಸರು "ದೀಪ್ತಾ ಘೋಷ್". ನಾನು ಲೇಕ್ ಮಾಲ್‌ಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದೆ. ಮಹಿಳಾ ಚಾಲಕಿಯಿಂದ ಕರೆ ಸ್ವೀಕರಿಸಿದೆ. ನಿಮ್ಮ ಡ್ರಾಪ್ ಎಲ್ಲಿಗೆ, ಪೇಮೆಂಟ್ ಹೇಗೆ ಮಾಡುತ್ತೀರಿ ಎಂದು ಸಭ್ಯವಾಗಿ ಕೇಳಿದರು. ನಮ್ಮ ಪ್ರಯಾಣದ ವೇಳೆ ದೀಪ್ತಾ ಘೋಷ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡೆ. ಈಕೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಹಲವು ಕಂಪನಿಗಳಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾಗಿ ತಿಳಿಸಿದರು.