ಗ್ವಾಲಿಯರ್ (ಮಧ್ಯಪ್ರದೇಶ): ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದು ಬಿಡಲಾಗಿದ್ದ ಚಿರತೆಗಳಲ್ಲಿ ಹೆಣ್ಣು ಚಿರತೆಯೊಂದು ಉದ್ಯಾನದಿಂದ ತಪ್ಪಿಸಿಕೊಂಡಿತ್ತು. ಗುರುವಾರ ಬೆಳಗ್ಗೆ ಶಿವಪುರ ಜಿಲ್ಲೆಯ ಬೈರಾದ್ ತಹಸಿಲ್ನ ಆನಂದಪುರ ಗ್ರಾಮದಲ್ಲಿ ಚಿರತೆಯ ಜಾಡು ಪತ್ತೆಯಾಗಿದ್ದು, ಕುನೋ ಉದ್ಯಾನದ ಅಧಿಕಾರಿಗಳು ಶಿವಪುರ ಜಿಲ್ಲೆಯ ಗ್ರಾಮಕ್ಕೆ ದೌಡಾಯಿಸಿದ್ದಾರೆ.
ಇತ್ತೀಚೆಗಷ್ಟೇ ಈ ಹೆಣ್ಣು ಚಿರತೆಗೆ ಆಶಾ ಎಂದು ನಾಮಕರಣ ಮಾಡಲಾಗಿತ್ತು. ಈ ಚಿರತೆಯು ಏಪ್ರಿಲ್ 5ರಂದು ಉದ್ಯಾನದಿಂದ ಪರಾರಿಯಾಗಿತ್ತು. ಈ ಚಿರತೆ ಸೆರೆಹಿಡಿಯಲು ಉದ್ಯಾನವನದ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಧಿಕಾರಿಗಳು ಹೆಣ್ಣು ಚಿರತೆಗೆ ಅಳವಡಿಸಿರುವ ಕಾಲರ್ ಐಡಿಯಿಂದ ಚಿರತೆಯ ಜಾಡು ಹಿಡಿದಿದ್ದಾರೆ. ಸದ್ಯ ಚಿರತೆಯು ಆನಂದಪುರ ಮತ್ತು ಗಾಜಿಗಢ ಗ್ರಾಮದಲ್ಲಿನ ಸಾಸಿವೆ ಜಮೀನಿನಲ್ಲಿ ಅಡಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿರತೆಯು ಜನವಸತಿ ಪ್ರದೇಶಕ್ಕೆ ಆಗಮಿಸಿರುವ ಬಗ್ಗೆ ತಿಳಿದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹೆಣ್ಣು ಚಿರತೆ ಪರಾರಿಯಾದ ಮೂರು ದಿನದ ಬಳಿಕ ನಮೀಬಿಯನ್ ಗಂಡು ಚಿರತೆಯೊಂದು ಉದ್ಯಾನದಿಂದ ಪರಾರಿಯಾಗಿತ್ತು. ಓಬನ್ ಎಂದು ಹೆಸರಿದ್ದ ಗಂಡು ಚಿರತೆಗೆ ಇತ್ತೀಚೆಗಷ್ಟೇ ಪವನ್ ಎಂದು ನಾಮಕರಣ ಮಾಡಲಾಗಿತ್ತು. ಪರಾರಿಯಾದ 5 ದಿನದಲ್ಲೇ ಚಿರತೆಯನ್ನು ಪತ್ತೆ ಹಚ್ಚಿ ಅಧಿಕಾರಿಗಳು ಮತ್ತೆ ಉದ್ಯಾನವನಕ್ಕೆ ಕರೆ ತಂದಿದ್ದರು.
2022ರ ಸೆಪ್ಟೆಂಬರ್ ತಿಂಗಳಲ್ಲಿ ನಮೀಬಿಯಾದಿಂದ ಒಟ್ಟು 8 ಚಿರತೆಗಳನ್ನು ಭಾರತಕ್ಕೆ ತರಲಾಗಿತ್ತು. 2023ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣಾ ಆಫ್ರಿಕಾದಿಂದ ಒಟ್ಟು 12 ಚಿರತೆಗಳನ್ನು ಕರೆತರಲಾಗಿತ್ತು. ಒಟ್ಟು 20 ವಿದೇಶಿ ಚಿರತೆಗಳು ಭಾರತಕ್ಕೆ ಆಗಮಿಸಿದ್ದವು. ಇದರಲ್ಲಿ ಕುನೋ ರಾಷ್ಟೀಯ ಉದ್ಯಾನವನದಲ್ಲಿದ್ದ ಎರಡು ಚಿರತೆಗಳು ಒಂದೇ ತಿಂಗಳಲ್ಲಿ ಸಾವನ್ನಪ್ಪಿದ್ದವು.