ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯಲ್ಲಿ ಭಾರಿ ವಿಷಾನಿಲ ದುರಂತ ಸಂಭವಿಸಿದೆ. ಸೀಡ್ಸ್ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ರಾಸಾಯನಿಕ ಅನಿಲ ಸೋರಿಕೆಯಿಂದಾಗಿ ಸುಮಾರು 150ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಅಸ್ವಸ್ಥಗೊಂಡಿದ್ದಾರೆ. ಅಚ್ಯುತಪುರಂ ಸಮೀಪ ಇರುವ ಕಾರ್ಖಾನೆಯಲ್ಲಿ ದುರ್ಘಟನೆ ನಡೆದಿದೆ.
ಈ ಕಾರ್ಖಾನೆಯಲ್ಲಿ ಸುಮಾರು 4 ಸಾವಿರ ಕಾರ್ಮಿಕರು 'ಬಿ' ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ವಿಷಾನಿಲ ಸೇವನೆಯಿಂದ ಉದ್ಯೋಗಿಗಳು ಸ್ಥಳದಲ್ಲೇ ವಾಂತಿ ಮಾಡಿಕೊಂಡು ಮೂರ್ಛೆ ಹೋಗಿ ಬಿದ್ದರು. ತಕ್ಷಣವೇ ಅಸ್ವಸ್ಥಗೊಂಡ ಕೆಲವರಿಗೆ ಕಾರ್ಖಾನೆ ಆವರಣದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಉಳಿದವರನ್ನು ಅಚ್ಯುತಪುರಂ ಮತ್ತು ಅನಕಾಪಲ್ಲಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಾರ್ಖಾನೆಯ ಬಸ್‌ಗಳು, ಕಾರುಗಳು ಮತ್ತು ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಗಿದೆ.