ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ತಡರಾತ್ರಿ ಪಾರ್ಟಿಯ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಗುಂಡೇಟಿಗೆ ಬಲಿಯಾಗಿರುವ ಘಟನೆ ನಡೆದಿದೆ. ಇದು ಆಕಸ್ಮಿಕವಾಗಿ ನಡೆದ ಗುಂಡಿನ ದಾಳಿಯೋ ಅಥವಾ ಪಿತೂರಿಯ ಭಾಗವಾಗಿ ಗುಂಡಿನ ದಾಳಿ ನಡೆಸಲಾಗಿದೆಯೋ ಎಂದು ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಕೊಲೆಯಾದ ವಿದ್ಯಾರ್ಥಿನಿಯನ್ನು ನಿಷ್ಠಾ ತ್ರಿಪಾಠಿ (23) ಎಂದು ಗುರುತಿಸಲಾಗಿದೆ. ಹರ್ದೋಯ್ ಜಿಲ್ಲೆಯ ಮೂಲದ ನಿಷ್ಠಾ ಲಖನೌದ ಬಿಬಿಡಿ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಇಲ್ಲಿನ ಚಿನ್ಹಾಟ್ ಪ್ರದೇಶದಲ್ಲಿರುವ ದಯಾಳ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಮತ್ತು ಗುರುವಾರದ ತಡರಾತ್ರಿ ಪಾರ್ಟಿ ನಡೆಯುತ್ತಿತ್ತು. ಸ್ನೇಹಿತ ಆದಿತ್ಯ ಪಾಠಕ್ ಕರೆಯ ಮೇರೆಗೆ ನಿಷ್ಠಾ ಪಾರ್ಟಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಆದಿತ್ಯ ಪಾಠಕ್ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಇದು ಆಕಸ್ಮಿಕ ಸಾವಲ್ಲ, ಇದೊಂದು ಕೊಲೆ ಎಂದು ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಡುಗೆ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನು ಗಮನಿಸಿದರೆ, ಡಿನ್ನರ್ ಅಂಡ್ ಡ್ರಿಂಕ್ಸ್ ಪಾರ್ಟಿ ನಡೆದಿದೆ ಎಂದು ವರದಿಯಾಗಿದೆ.