ಡೆಹ್ರಾಡೂನ್ (ಉತ್ತರಾಖಂಡ) :ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಗಳ ಸಂರಕ್ಷಣಾ ತಾಣವಾಗಿರುವ ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಆರು ಸಾವಿರ ಮರಗಳ ಹರಣ ನಡೆಸಲಾಗಿದ್ದು, ಈ ಬಗ್ಗೆ ಹೈಕೋರ್ಟ್ ಗರಂ ಆಗಿದೆ. ಈ ಬಗ್ಗೆ ಸಿಬಿಐ ತನಿಖೆ ಯಾಕೆ ಮಾಡಿಸಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
2017 ರಿಂದ 2022 ರ ನಡುವೆ ಟೈಗರ್ ಸಫಾರಿ ಮತ್ತು ಇತರ ಪ್ರವಾಸಿ ಸೌಲಭ್ಯಗಳಿಗಾಗಿ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಮರಗಳ ಮಾರಣಹೋಮ ನಡೆಸಲಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಉದ್ಯಾನವನದಲ್ಲಿ ಕಟ್ಟಡಗಳು ಮತ್ತು ಅವುಗಳಿಗೆ ದೊಡ್ಡ ಗೋಡೆಗಳನ್ನು ನಿರ್ಮಿಸಲಾಗಿದೆ. ಸಂರಕ್ಷಿತ ಅಭಯಾರಣ್ಯದಲ್ಲಿ ಅಕ್ರಮ ಚಟುವಟಿಕೆಯಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠವು ಪ್ರಕರಣದ ಗಂಭೀರತೆ ಮತ್ತು ಉನ್ನತ ಅಧಿಕಾರಿಗಳ ಅನುಮಾನಾಸ್ಪದ ಪಾತ್ರ ಪರಿಗಣಿಸಿ ಸಿಬಿಐ ತನಿಖೆ ಏಕೆ ನೀಡಬಾರದು? ಎಂದು ಪ್ರಶ್ನಿಸಿದೆ.
ಪ್ರಕರಣದಲ್ಲಿ ಅರಣ್ಯ ಸಚಿವರ ಪಾತ್ರ?:ಮರಗಳ ಮಾರಣಹೋಮ ನಡೆದ ಅವಧಿಯಲ್ಲಿ ಹರಕ್ ಸಿಂಗ್ ರಾವತ್ ಅವರು ಅರಣ್ಯ ಸಚಿವರಾಗಿದ್ದರು. ಅವರ ಅವಧಿಯಲ್ಲೇ ಈ ಅಕ್ರಮ ಚಟುವಟಿಕೆಗಳು ನಡೆದಿವೆ ಎಂದು ಡೆಹ್ರಾಡೂನ್ ನಿವಾಸಿ ಅನು ಪಂತ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.