ಹೈದರಾಬಾದ್: ಇಲ್ಲಿನ ಖಾಸಗಿ ಕಾಲೇಜೊಂದರಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಕಾಲೇಜಿನಲ್ಲಿ ಪಿಯುಸಿ ಪಾಸು ಮಾಡಿದ್ದ ವಿದ್ಯಾರ್ಥಿಯೊಬ್ಬ ಫೀಸು ಬಾಕಿ ಉಳಿಸಿಕೊಂಡಿದ್ದ. ಆದರೆ ತನ್ನ ಪ್ರಮಾಣಪತ್ರಗಳನ್ನು ನೀಡುವಂತೆ ಕೋರಿ ಆತ ಪ್ರಿನ್ಸಿಪಾಲರನ್ನು ಭೇಟಿಯಾಗಿದ್ದ. ಪೂರ್ತಿ ಫೀಸ್ ಕಟ್ಟಿದ ಮೇಲೆಯೇ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಪ್ರಿನ್ಸಿಪಾಲ್ ಹೇಳಿದ್ದರಂತೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಂದಿಗೆ ಸಂಘಟನೆಯೊಂದರ ಕಾರ್ಯಕರ್ತರು ಜೊತೆಗಿದ್ದರಂತೆ. ಪ್ರಿನ್ಸಿಪಾಲರೊಂದಿಗೆ ವಿದ್ಯಾರ್ಥೀಗಳ ವಾಗ್ವಾದಕ್ಕಿಳಿದಿದ್ದಾರೆ. ಅದರಲ್ಲೊಬ್ಬ ವಿದ್ಯಾರ್ಥಿಯು ತನ್ನೊಂದಿಗೆ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲನ್ನು ಮೈಮೇಲೆ ಸುರಿದುಕೊಂಡು, ಬೆಂಕಿ ಹಚ್ಚಿಕೊಳ್ಳುವುದಾಗಿ ಪ್ರಿನ್ಸಿಪಾಲರನ್ನು ಬೆದರಿಸಿದ್ದಾನೆ. ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳುವಾಗ ಅದು ಕೋಣೆಯ ಎಲ್ಲ ಕಡೆಗೂ ಚಿಮ್ಮಿದ್ದು, ದೇವರ ಫೋಟೊ ಮುಂದಿನ ದೀಪದಿಂದ ಬೆಂಕಿ ಹೊತ್ತಿಕೊಂಡಿದೆ.