ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ರಾಜಕೀಯ ಮುತ್ಸದ್ಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ 89 ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಸೇರಿ ಅನೇಕ ನಾಯಕರು ಶುಭ ಕೋರಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ಮಾಡಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಜನ್ಮ ದಿನದ ಶುಭಾಶಯಗಳು. ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಹೊಂದಿರುವ ನಿಮ್ಮಿಂದ ತಿಳಿಯುವುದು ಬಹಳಷ್ಟಿದೆ. ನಿಮಗೆ ಆಯುರಾರೋಗ್ಯ ಪ್ರಾಪ್ತಿಯಾಗಲಿ ಎಂದು ಬಯಸುತ್ತೇನೆ ಎಂದಿದ್ದಾರೆ.
ಎಐಸಿಸಿ ಅಧಿಕೃತ ಟ್ವಿಟರ್ನಲ್ಲಿ ಮನಮೋಹನ್ ಸಿಂಗ್ ಅವರಿಗೆ ಶುಭ ಕೋರಲಾಗಿದೆ. ದೂರದೃಷ್ಟಿವುಳ್ಳ ನಾಯಕ ಮನಮೋಹನ್ ಸಿಂಗ್, ನೀವು ನಿಜವಾಗಿಯೂ ಭಾರತದ ಅರ್ಹ ನಾಯಕ ಎಂದು ಉಲ್ಲೇಖಿಸಿ ಟ್ವೀಟ್ ಮಾಡಿದೆ.
ನೀವು ಈ ದೇಶಕ್ಕೆ ಕೊಟ್ಟಿರುವ ಅಪಾರ ಕೊಡುಗೆಗಳನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಇಡೀ ದೇಶ ನಿಮ್ಮನ್ಮು ಅಗಾಧವಾಗಿ ಪ್ರೀತಿಸಿ, ಗೌರವಿಸುತ್ತದೆ. ಭಾರತದ ಪ್ರಗತಿಗೆ ಸಿಂಗ್ ಅವರ ಅನಿಯಮಿತ ಬದ್ಧತೆ, ಹಣಕಾಸು ಮಂತ್ರಿಯಾಗಿದ್ದಾಗಿನಿಂದ ಪ್ರಧಾನ ಮಂತ್ರಿಯವರೆಗೆ ಅವರು ಕೈಗೊಂಡ ಯೋಜನೆಗಳು ಊಹೆಗೂ ನಿಲುಕದಷ್ಟು ದೇಶಕ್ಕೆ ಲಾಭ ತಂದುಕೊಟ್ಟಿವೆ ಎಂದು ಹೇಳಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಹಿರಿಯ ನಾಯಕರಾದ ಸಚಿನ್ ಪೈಲಟ್, ಮುಕುಲ್ ವಾಸ್ನಿಕ್, ಸಲ್ಮಾನ್ ಖುರ್ಷಿದ್ ಸೇರಿದಂತೆ ಇತರರು ಸಿಂಗ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.
ಪ್ರಖ್ಯಾತ ಅರ್ಥಶಾಸ್ತ್ರಜ್ಞರಾಗಿರುವ ಮನಮೋಹನ್ ಸಿಂಗ್ 1990 ರ ದಶಕದಲ್ಲಿ ವ್ಯಾಪಕವಾದ ಸುಧಾರಣೆಗಳನ್ನು ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. 2014 ರವರೆಗೆ 10 ವರ್ಷಗಳ ಕಾಲ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು.