ತಿರುವಳ್ಳೂರು (ತಮಿಳುನಾಡು): ತನ್ನ ಮಗನಿಗೆ ಕಚ್ಚಿದ ಎರಡು ಹಾವುಗಳೊಂದಿಗೆ ತಂದೆಯೊಬ್ಬ ಆಸ್ಪತ್ರೆಗೆ ಹೋದ ವಿಚಿತ್ರ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ಆಸ್ಪತ್ರೆಯಲ್ಲಿ ಕೆಲ ಕಾಲ ಭೀತಿಯ ವಾತಾವರಣ ಕೂಡ ನಿರ್ಮಾಣವಾಗಿತ್ತು.
ಇಲ್ಲಿನ ತಿರುತ್ತಣಿ ಪಕ್ಕದ ಕೊಲ್ಲ ಕುಪ್ಪಂ ಗ್ರಾಮದ ಎಲ್ಲಮ್ಮಾಳ್ ಮತ್ತು ಮಣಿ ದಂಪತಿಯ ಮಗ, 7 ವರ್ಷದ ಮುರುಗನ್ ಎಂಬ ಬಾಲಕನಿಗೆ ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಎರಡು ಹಾವುಗಳು ಕಚ್ಚಿವೆ. ಇದನ್ನು ನೋಡಿದ ಮಣಿ ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ, ಎರಡು ಹಾವುಗಳನ್ನೂ ಹೊಡೆದಿದ್ದಾರೆ. ವಿಚಿತ್ರ ಎಂದರೆ ಎರಡೂ ಹಾವುಗಳೊಂದಿಗೆ ತನ್ನ ಮಗನನ್ನು ಚಿಕಿತ್ಸೆಗಾಗಿ ತಿರುತ್ತಣಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.