ಭೋಪಾಲ್(ಮಧ್ಯಪ್ರದೇಶ):ದೇಶದಲ್ಲಿ ಕೋವಿಡ್ ಮಹಾಮಾರಿ ರೌದ್ರನರ್ತನವಾಡ್ತಿದ್ದು, ಬಡವರು ಸಂಕಷ್ಟಕ್ಕೊಳಗಾಗಿ ತೊಂದರೆ ಅನುಭವಿಸುವಂತಾಗಿದೆ. ಇದರ ಮಧ್ಯೆ ಕೆಲ ಅಧಿಕಾರಿಗಳ ಬೇಜವಾಬ್ದಾರಿತನ ಅವರನ್ನ ಮತ್ತಷ್ಟು ತೊಂದರೆಗೊಳಗಾಗುವಂತೆ ಮಾಡ್ತಿದೆ.
ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದೆ. ತಂದೆಯೋರ್ವ 16 ವರ್ಷದ ಮಗಳ ಮೃತದೇಹವನ್ನ ಮಂಚದ ಮೇಲಿಟ್ಟುಕೊಂಡು ಕಾಲ್ನಡಿಗೆ ಮೂಲಕ 35 ಕಿಲೋ ಮೀಟರ್ ನಡೆದು ಆಸ್ಪತ್ರೆಗೆ ತಲುಪಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾನೆ. ಮಗಳ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಸುಮಾರು 7 ಗಂಟೆಗಳ ಕಾಲ 35 ಕಿಲೋ ಮೀಟರ್ ನಡೆದು ಹೋಗಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಗಳ ಮೃತದೇಹ ಹೊತ್ತು 35 ಕಿಲೋ ಮೀಟರ್ ನಡೆದು ಹೋದ ತಂದೆ ಏನಿದು ಘಟನೆ?
ಮೇ. 5ರಂದು 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಬರುವಂತೆ ಆದೇಶ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ, ಕುಟುಂಬಕ್ಕೆ ವಾಹನ ಬಾಡಿಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಜತೆಗೆ ಅಧಿಕಾರಿಗಳು ಯಾವುದೇ ಸಾರಿಗೆ ವ್ಯವಸ್ಥೆ ಸಹ ಮಾಡಿಲ್ಲ.
ಇದನ್ನೂ ಓದಿ: ಅಸ್ಸೋಂನಲ್ಲಿ ನಾಳೆಯಿಂದ ಹೊಸ ಸರ್ಕಾರ... ಸಿಎಂ ಆಗಿ ಹಿಮಂತ ಬಿಸ್ವಾ ಶರ್ಮಾ ಪ್ರಮಾಣ
ಬಾಲಕಿಯ ತಂದೆ ಧಿರಪತಿ ಸಿಂಗ್ ಹಾಗೂ ಕೆಲ ಗ್ರಾಮಸ್ಥರು ಬೆಳಗ್ಗೆ ಕಾಲ್ನಡಿಗೆ ಮೂಲಕ ಮೃತದೇಹ ಹೊತ್ತು ಸಾಗಿದ್ದು, ಏಳು ಗಂಟೆ ಬಳಿಕ ಆಸ್ಪತ್ರೆ ತಲುಪಿದ್ದಾರೆ. ಬಾಲಕಿ ತಂದೆ ಹೇಳಿರುವ ಪ್ರಕಾರ ಬೆಳಗ್ಗೆ 9 ಗಂಟೆಗೆ ಹೊರಟು ಸಂಜೆ 4 ಗಂಟೆಗೆ ಆಸ್ಪತ್ರೆ ತಲುಪಿದ್ದಾಗಿ ತಿಳಿಸಿದ್ದಾರೆ. ಅನಾರೋಗ್ಯದ ನಡುವೆ ಕೂಡ ಈ ಕೆಲಸ ಮಾಡಿದ್ದೇನೆ. ನನಗೆ ಯಾರು ಸಹಾಯ ಮಾಡಿಲ್ಲ ಎಂದಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಅರುಣ್ ಸಿಂಗ್, ಮೃತ ದೇಹ ಮರಣೋತ್ತರಕ್ಕಾಗಿ ರವಾನೆ ಮಾಡಲು ಇಲಾಖೆ ಯಾವುದೇ ಬಜೆಟ್ ನೀಡಿಲ್ಲ. ಹೀಗಾಗಿ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.