ಸುಂದರ್ಗಢ್ (ಒಡಿಶಾ): ಅಪ್ಪ-ಅಮ್ಮನ ಕಲಹದಲ್ಲಿ ಮೂವರು ಪುಟ್ಟ ಕಂದಮ್ಮಗಳು ಬಲಿಯಾಗಿದ್ಧಾರೆ. ಹೆತ್ತ ತಂದೆಯೇ ಸಣ್ಣ-ಸಣ್ಣ ಮಕ್ಕಳನ್ನು ದಾರುಣವಾಗಿ ಕೊಲೆಗೈದು ಬಾವಿಗೆ ಎಸೆದಿದ್ದಾನೆ. ಒಡಿಶಾದ ಸುಂದರ್ಗಢ್ ಜಿಲ್ಲೆಯ ಕುಲಾ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಪಾಂಡು ಮುಂಡ ಎಂಬಾತನೇ ಈ ಪಾಪಿ ತಂದೆಯಾಗಿದ್ದು, 5 ವರ್ಷದ ಮಗಳು ಸೀಮಾ, 2 ವರ್ಷದ ಮಗ ರಾಜು ಮತ್ತು ಮೂರು ತಿಂಗಳ ಪುಟ್ಟ ಮಗಳು ತಂದೆಯ ಕೈಯಲ್ಲಿ ಹತರಾದ ನತದೃಷ್ಟರು.
ಕುಡಿದು ಬಂದಿದ್ದ ಹಂತಕ: ಪಾಂಡು ಶನಿವಾರ ರಾತ್ರಿ ಕುಡಿದು ಮನೆಗೆ ಬಂದಿದ್ದ. ಇದರಿಂದ ಪತ್ನಿ ಧುಬಾಲಿಯೊಂದಿಗೆ ಜಗಳ ಶುರುವಾಗಿತ್ತು. ಅಂತೆಯೇ ಕೊಡಲಿ ತೆಗೆದುಕೊಂಡು ಪತ್ನಿ ಮೇಲೆ ದಾಳಿ ಮಾಡಿ ಕೊಲೆ ಯತ್ನಿಸಿದ್ದ. ಆಗ ಹಂತಕ ಪತಿಯಿಂದ ತಪ್ಪಿಸಿಕೊಂಡು ಆಕೆ ಜೀವ ಉಳಿಸಿಕೊಂಡಿದ್ದಾಳೆ. ಆದರೆ, ಇದೇ ಕೊಡಲಿಯಿಂದ ಸಣ್ಣ ಮಕ್ಕಳ ಮೇಲೆ ಮೇಲೂ ಕಟುಕ ಪಾಂಡು ದಾಳಿ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಅಲ್ಲದೇ, ರಾತ್ರಿಯೇ ಮೂವರು ಮಕ್ಕಳ ಶವಗಳನ್ನು ಪಕ್ಕದ ಬಾವಿಯಲ್ಲಿ ಎಸೆದು ಪರಾರಿಯಾಗಿದ್ಧಾನೆ. ಈ ಘಟನೆಯ ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳ ಶವಗಳನ್ನು ಬಾವಿಯಿಂದ ಹೊರತೆಗೆದಿದ್ಧಾರೆ. ಸದ್ಯ ಮೂರೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಧರ್ಮಸ್ಥಳದಿಂದ ವಾಪಸ್ಸಾಗುತ್ತಿದ್ದಾಗ ಕಾರು-ಲಾರಿ ಅಪಘಾತ; ಮಹಿಳೆ ಸಾವು, ನಾಲ್ವರಿಗೆ ಗಾಯ