ಸಮಸ್ತಿಪುರ(ಬಿಹಾರ): ತನ್ನ ಪತ್ನಿಯ ಮೇಲಿನ ಕೋಪದಿಂದ ವ್ಯಕ್ತಿಯೊಬ್ಬ ತನ್ನ ಮಗನಿಗೆ ವಿಷ ಉಣಿಸಿ, ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಸಿರುವ ಘಟನೆ ಸಿಂಘಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಡಿಯಾ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕ ಅರವಿಂದ್ ಸದಾ (3 ) ಮೃತಪಟ್ಟಿದ್ದಾನೆ. ತಂದೆ ಸುಂದರ್ ಸದಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದರ್ಭಂಗಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುಂದರ್ ಸದಾ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ನಿನ್ನೆ (ಸೋಮವಾರ ) ರಾತ್ರಿ ಮನೆಗೆ ಬಂದ ಆತ ಅಮಾಯಕ ಮಗನಿಗೆ ವಿಷ ಉಣಿಸಿ, ತಾನು ವಿಷ ಕುಡಿದಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಿಂಘಿಯಾ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸುಂದರ್ ಸದಾ ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯ ಬಗ್ಗೆ ಡಿವೈಎಸ್ಪಿ ಶಿವಂ ಕುಮಾರ್ ಮಾತನಾಡಿ, "ಸುಂದರ್ ಸದಾ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ತನ್ನ ಹೆಂಡತಿ ಮೇಲಿನ ಕೋಪದಿಂದ ಅವನು ಮಗನಿಗೆ ವಿಷ ಉಣಿಸಿದ್ದ, ಇದರಿಂದ ಮಗು ಮೃತಪಟ್ಟಿದೆ. ಗಂಭೀರ ಸ್ಥಿತಿಯಲ್ಲಿರುವ ಸುಂದರ್ ಸದಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದರು.