ಹೈದರಾಬಾದ್(ತೆಲಂಗಾಣ): ಗಲಾಟೆ ಮಾಡಿದ್ದಕ್ಕೆ ತಂದೆ ತನ್ನ ಎರಡು ವರ್ಷದ ಮಗುವಿಗೆ ಮನಬಂದಂತೆ ಥಳಿಸಿ ಕೊಂದಿರುವ ಅಮಾನವೀಯ ಘಟನೆ ನರೇಡ್ ಮೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಂಕುಟೊಳ್ಳ ಸುಧಾಕರ್ ಹಾಗೂ ವಾರಂಗಲ್‌ನ ದಿವ್ಯಾ ದಂಪತಿಯ ಪುತ್ರ ಜೀವನ್ (2) ಮೃತಪಟ್ಟಿರುವ ಮಗು.
ಪೊಲೀಸರ ಮಾಹಿತಿ ಪ್ರಕಾರ, 2019 ರಲ್ಲಿ ವಿವಾಹವಾಗಿದ್ದ ಈ ದಂಪತಿ, ನರೇಡ್‌ಮೆಟ್‌ನ ವಾಜಪೇಯಿ ನಗರದಲ್ಲಿ ವಾಸವಿದ್ದರು. ಅವರಿಗೆ ಜೀವನ್ ಒಬ್ಬನೇ ಮಗ. ಇಲ್ಲಿನ ಜೆ ಜೆ ನಗರದ ಎಸ್.ಎಸ್. ಬಿ ಕ್ಲಾಸಿಕ್ ಅಪಾರ್ಟ್ ಮೆಂಟ್ ನಲ್ಲಿ ಆರೋಪಿ ಕುಂಕುಟೊಳ್ಳ ಸುಧಾಕರ್ ವಾಚ್ಮನ್ ಕೆಲಸ ಮಾಡಿಕೊಂಡಿದ್ದರು. ಇವರ ಪತ್ನಿ ದಿವ್ಯಾ ಮನೆಗೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಮದ್ಯ ವ್ಯಸನಿಯಾಗಿದ್ದ ಸುಧಾಕರ್ ಒಮ್ಮೊಮ್ಮೆ ಸೈಕೋ ರೀತಿ ವರ್ತಿಸುತ್ತಿದ್ದರಂತೆ.
ಘಟನೆ ಸಂಭವಿಸಿದ್ದು ಹೀಗೆ:ಸೋಮವಾರ ರಾತ್ರಿ 9.45ಕ್ಕೆ ಬಾಲಕ ಆಟವಾಡುತ್ತಿದ್ದನು. ಈ ವೇಳೆ ಮಗು ಗಲಾಟೆ ಮಾಡಿದೆ. ಆಗ ತಂದೆ ಸುಧಾಕರ್ ಸಿಟ್ಟಿನಿಂದ ಮಗುವಿನ ಕೆನ್ನೆಗೆ ಜೋರಾಗಿ ಥಳಿಸಿದ್ದಾರೆ. ಮಗುವಿಗೆ ಥಳಿಸಿದ್ದಕ್ಕೆ ಪತಿಗೆ ಬೈದು ಪತ್ನಿ ಕೆಲಸದ ನಿಮಿತ್ತ ಅಪಾರ್ಟ್ ಮೆಂಟ್ ಕಡೆಗೆ ತೆರಳಿದ್ದಾರೆ. ಮಗು ಇದ್ದಕ್ಕಿದ್ದಂತೆ ಕೂಗಿದಾಗ ಅವರು ಹಿಂತಿರುಗಿದ್ದಾರೆ. ಆ ವೇಳೆ ಮಗುವಿನ ದೇಹ, ತಲೆ ಮತ್ತು ಮುಖದ ಮೇಲೆ ತೀವ್ರ ಗಾಯಗಲಾಗಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಮಗು ಮೃತಪಟ್ಟಿರುವದನ್ನು ವೈದ್ಯರು ದೃಢಪಡಿಸಿದ್ದಾರೆ.