ಮಂಚೇರಿಯಲ್(ತೆಲಂಗಾಣ): ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಕಟ್ಟಿಕೊಂಡ ಹೆಂಡತಿ ಕಾರಣ ಎಂದು ಆರೋಪ ಮಾಡಿರುವ ವ್ಯಕ್ತಿಯೋರ್ವ ಸೊಸೆಯನ್ನೇ ಕೊಲೆಗೈದಿದ್ದಾನೆ. ತೆಲಂಗಾಣದ ಮಂಚೇರಿಯಲ್ನಲ್ಲಿ ಈ ಘಟನೆ ನಡೆದಿದ್ದು, ಕೊಡಲಿಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ಪೊಲೀಸರು ತಿಳಿಸಿರುವ ಪ್ರಕಾರ, ಲಿಂಗಣ್ಣಪೇಟೆಯ ಸಾಯಿಕೃಷ್ಣ, ಸೌಂದರ್ಯ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದನು. ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಇವರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಆದರೆ, ಕಳೆದ ಐದು ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ ಕೆಲ ದಿನಗಳ ನಂತರ ಊರಿಗೆ ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮದುವೆಯಾದ ಎರಡು ತಿಂಗಳಲ್ಲೇ ಸಾಯಿಕೃಷ್ಣ ಕುಡಿತದ ಚಟಕ್ಕೊಳಗಾಗಿದ್ದು, ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಂಡನ ನಿಧನದ ಬಳಿಕ ಸೌಂದರ್ಯ ಅದೇ ಗ್ರಾಮದಲ್ಲಿ ವಾಸವಾಗಿದ್ದ ತಾಯಿಯ ಮನೆಗೆ ಬಂದಿದ್ದಾಳೆ. ಮಗನ ಸಾವಿಗೆ ಹೆಂಡತಿ ಸೌಂದರ್ಯ ಕಾರಣವೆಂದು ಆರೋಪ ಮಾಡಿರುವ ಸಾಯಿಕೃಷ್ಣ ತಂದೆ ಇಂದು ಬೆಳಗ್ಗೆ ಸೊಸೆ ಉಳಿದುಕೊಂಡಿದ್ದ ಸ್ಥಳಕ್ಕೆ ಹೋಗಿ ಜಗಳವಾಡಿ, ಹಲ್ಲೆಗೆ ಮುಂದಾಗಿದ್ದಾನೆ.
ಇದನ್ನೂ ಓದಿ:ಮುಂಬೈನಿಂದ ಗೋವಾಕ್ಕೆ ಬಂದ ಹಡಗಿನಲ್ಲಿ 66 ಮಂದಿಗೆ ಕೋವಿಡ್ ಸೋಂಕು
ಈ ವೇಳೆ ಸೌಂದರ್ಯ ತಂದೆ ಲಕ್ಷ್ಮಯ್ಯ ತಡೆಯಲು ಮುಂದಾಗಿದ್ದು, ಆತನಿಗೆ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಇದರ ಬೆನ್ನಲ್ಲೇ ಸೌಂದರ್ಯಗೆ ಕೊಡಲಿಯಿಂದ ಇರಿದು ಪರಾರಿಯಾಗಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದು, ಆಕೆ ಸಾವನ್ನಪ್ಪಿದ್ದಾಳೆ.
ಆಸ್ಪತ್ರೆಗೆ ದಾಖಲು ಮಾಡಿದ ವೇಳೆ ಲಕ್ಷ್ಮಯ್ಯ ಕೂಡ ಸಾವನ್ನಪ್ಪಿದ್ದು, ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.