ಹಮೀರ್ಪುರ್(ಉತ್ತರ ಪ್ರದೇಶ): ಸಾಮಾನ್ಯವಾಗಿ ಮದುವೆ ಸಮಾರಂಭಕ್ಕೆ ಹೋದಾಗ ಗೋಡೆ ಗಡಿಯಾರ, ರಿಂಗ್, ಚಿನ್ನದ ಸರ, ಫೋಟೋ ಇತ್ಯಾದಿಗಳನ್ನು ಕೊಡುವುದು ಸಾಮಾನ್ಯ. ಆದ್ರೆ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವರದಕ್ಷಿಣೆಯಾಗಿ ಅಳಿಯನಿಗೆ ಮಾವ ಬುಲ್ಡೋಜರ್ ಕೊಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ವರದಕ್ಷಿಣೆಯಾಗಿ ಬುಲ್ಡೋಜರ್ ಪಡೆದ ಮೊದಲ ಪ್ರಸಂಗ ಇದಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬುಲ್ಡೋಜರ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯುಪಿ ಬುಲ್ಡೋಜರ್‌ಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಚಾರ ಸಂದರ್ಭದಲ್ಲಿ ಬುಲ್ಡೋಜರ್ ಬಾಬು ಎಂದು ಕಿಚಾಯಿಸಿದ್ದು, ಭಾರಿ ಸದ್ದು ಮಾಡಿತ್ತು. ಇದೀಗ ವರದಕ್ಷಿಣೆಯಾಗಿ ಬುಲ್ಡೋಜರ್ ಸಿಕ್ಕಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸುಮೇರ್‌ಪುರ ಡೆವಲಪ್‌ಮೆಂಟ್ ಬ್ಲಾಕ್‌ನ ದೇವಗಾಂವ್ ಗ್ರಾಮದ ನಿವಾಸಿ, ನಿವೃತ್ತ ಯೋಧ ಪರಶುರಾಮ್ ಎಂಬುವರು ತಮ್ಮ ಪುತ್ರಿ ನೇಹಾಳನ್ನು ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವ ಸೌಂಖಾರ್ ನಿವಾಸಿ ಯೋಗೇಂದ್ರ ಅಲಿಯಾಸ್ ಯೋಗಿ ಪ್ರಜಾಪತಿ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು.