ಮುಂಬೈ:ಕೌಟುಂಬಿಕ ಕಲಹ ಹಿನ್ನೆಲೆ, ತಂದೆಯೇ ಮಕ್ಕಳಿಗೆ ಐಸ್ಕ್ರೀಂನಲ್ಲಿ ಇಲಿ ಪಾಷಾಣ ಹಾಕಿಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯಲ್ಲಿ ಆರು ವರ್ಷದ ಬಾಲಕ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 25 ರಂದು ನಡೆದಿರುವ ಘಟನೆ ಬಾಲಕ ಮೃತಪಟ್ಟ ನಂತರ ಬೆಳಕಿಗೆ ಬಂದಿದೆ.
ನಾಜಿಯಾ ಬೇಗಂ ಹಾಗೂ ನೌಶಾದ್ ಅನ್ಸಾರಿ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದವರು. ಹಣದ ವಿಚಾರದಲ್ಲಿ ಅವರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ನಡೆದ ಜಗಳದಲ್ಲಿ ನಾಜಿಯಾ ಮಕ್ಕಳನ್ನು ತೊರೆದು ಸಹೋದರಿ ಜತೆ ಹೋದರು. ಆ ವೇಳೆ ಅನ್ಸಾರಿ, ಮಕ್ಕಳಿಗೆ ಐಸ್ಕ್ರೀಂ ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ, ಅದರಲ್ಲಿ ವಿಷ ಬೆರೆಸಿ ನೀಡಿದ್ದಾರೆ ಎಂದು ತಿಳಿದುಬಂದಿದೆ.