ಅಕೋಲಾ:ಜಗಳದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಬಾಲಕನೊಬ್ಬನಿಗೆ ಪೊಲೀಸ್ ಅಧಿಕಾರಿ ಕಪಾಳಮೋಕ್ಷ ಮಾಡಿದ್ದು, ಇದನ್ನು ಕಣ್ಣಾರೆ ನೋಡಿರುವ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಅಕೋಲಾದ ಬೋರ್ಗಾಂವ್ನಲ್ಲಿ ಈ ಘಟನೆ ನಡೆದಿದೆ. ಗಣೇಶ್ ಸತವ್ ಹಾಗೂ ಸತೀಶ್ ಮಹಾಜನ್ ನಡುವೆ ವಿವಾದ ಉಂಟಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸತೀಶ್ ಮಹಾಜನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ವಿಚಾರಣೆ ನಡೆಸಲು ಗಣೇಶ್ ಸತವ್ನಿಗೆ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗನನ್ನು ತಂದೆ ಸಹ ಹಿಂಬಾಲಿಸಿದ್ದಾರೆ.
ಇದನ್ನೂ ಓದಿ: ನಮ್ಮಷ್ಟು ವೇಗವಾಗಿ ಯಾವ ದೇಶವು ವ್ಯಾಕ್ಸಿನೇಷನ್ ಮಾಡುತ್ತಿಲ್ಲ: ಸಚಿವ ಡಾ.ಹರ್ಷವರ್ಧನ್
ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಆತನ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿದ್ದು, ಇದನ್ನು ನೋಡಿರುವ ತಂದೆ ಶಿವಾಜಿ ಸತವ್ ಹೃದಯಾಘಾತದಿಂದ ಕುಸಿದು ಬಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಪೊಲೀಸ್ ಠಾಣೆ ಮುಂದಿಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯಲ್ಲಿದ್ದ ಅಧಿಕಾರಿ ಅವರಿಗೆ ತಿಳಿವಳಿಕೆ ಹೇಳಿ ಮರಣೋತ್ತರ ಪರೀಕ್ಷೆಗೆ ಶವ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಆ ನಂತರ ವೈದ್ಯಕೀಯ ಕಾಲೇಜ್ನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸುನಿಲ್ ಸೋಲಂಕೆ ಮಾಹಿತಿ ನೀಡಿದ್ದಾರೆ.