ಇಂದೋರ್ (ಮಧ್ಯಪ್ರದೇಶ): ಕೋವಿಡ್ ನಿಯಂತ್ರಣಕ್ಕಾಗಿ ದೇಶದಲ್ಲಿ ಈ ಹಿಂದೆ ಹೇರಲಾಗಿದ್ದ ಲಾಕ್ಡೌನ್ ಎಷ್ಟೋ ಜನರ ಕೆಲಸ ಕಿತ್ತುಕೊಂಡು ಅವರ ಬದುಕಿಗೆ ಕೊಳ್ಳಿ ಇಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂಥ ಘಟನೆಯೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಗಳ ಶಾಲಾ ಶುಲ್ಕವನ್ನು ಕಟ್ಟಲು ಸಾಧ್ಯವಾಗದ ಕಾರಣಕ್ಕೆ ಮನನೊಂದು ತಂದೆಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಇಂದೋರ್ನಲ್ಲಿ ನಡೆದಿದೆ. ಇಲ್ಲಿನ ಹತೋಡ್ ಪ್ರದೇಶದ ನಿವಾಸಿ ಅಮಿತ್ ಎಂಬಾತನೇ ಸಾವಿಗೆ ಶರಣಾದ ತಂದೆ ಎಂದು ಗುರುತಿಸಲಾಗಿದೆ.
ಇಬ್ಬರು ಮಕ್ಕಳನ್ನು ಹೊಂದಿದ್ದ ಅಮಿತ್ ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದರು. ಓರ್ವ ಬಾಲಕಿ ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಆದರೆ, ಮತ್ತೆ ಕೆಲಸ ಸಿಗದ ಕಾರಣ ಮಗಳ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಾಲಾ ಆಡಳಿತ ಮಂಡಳಿಯವರು ಶುಲ್ಕ ಪಾವತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದರು. ಅಲ್ಲದೇ, ಮಗಳು ಮೂರನೇ ತರಗತಿ ಪೂರೈಸಿದ್ದರೂ, ಎರಡನೇ ತರಗತಿಯ ಫಲಿತಾಂಶವನ್ನು ಮಾತ್ರ ನೀಡಿದ್ದರು.