ರಾಯಗಂಜ್(ಪಶ್ಚಿಮ ಬಂಗಾಳ): ತಂದೆಯೋರ್ವರು ಮೃತ ಮಗುವಿನ ಶವವನ್ನು ಬ್ಯಾಗಿನಲ್ಲಿರಿಸಿ ಬಸ್ಸಿನಲ್ಲಿ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ಪಶ್ಚಿಮಬಂಗಾಳದ ರಾಯ್ಗಂಜ್ ಎಂಬಲ್ಲಿ ನಡೆದಿದೆ. ಮೃತ ಮಗುವಿನ ಶವವನ್ನು ಆ್ಯಂಬುಲೆನ್ಸ್ನಲ್ಲಿ ತೆಗೆದುಕೊಂಡು ಹೋಗಲು ಹಣವಿಲ್ಲದೆ ತಂದೆ ಬ್ಯಾಗಿನಲ್ಲಿರಿಸಿ ಶವವನ್ನು ಸಾಗಿಸಿದ್ದಾರೆ. ಇಲ್ಲಿನ ಸಿಲಿಗುರಿಯಿಂದ ಕಲಿಯಾಗಂಜ್ಗೆ ಮಗುವಿನ ಮೃತದೇಹವನ್ನು ಸಾಗಿಸಲಾಗಿದೆ. ಈ ಮನಕಲಕುವ ಘಟನೆ ದೇಶಾದ್ಯಂತ ಸುದ್ದಿಯಾಗಿದೆ.
ಕಲಿಯಾಜಂಗ್ನ ಡಂಗಿಪಾರ ಗ್ರಾಮದ ನಿವಾಸಿಯಾಗಿರುವ ಅಸೀಂ ದೇವಶರ್ಮ ದಂಪತಿ ಕಳೆದ ಐದು ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಮಕ್ಕಳು ಕಳೆದ ಭಾನುವಾರ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದವು. ಇದರಿಂದ ಗಾಬರಿಗೊಂಡ ತಂದೆ ಅಸೀಂ ಇಲ್ಲಿನ ಕ್ಷಿಲಿಯಾಗಂಜ್ ಜನರಲ್ ಆಸ್ಪತ್ರೆಗೆ ತಮ್ಮ ಅವಳಿ ಮಕ್ಕಳನ್ನು ದಾಖಲಿಸಿದ್ದರು. ಈ ಮಕ್ಕಳ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದರಿಂದ ಬಳಿಕ ಈ ನವಜಾತ ಶಿಶುಗಳನ್ನು ರಾಯ್ಗಂಜ್ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಕಳೆದ ಸೋಮವಾರ ಈ ಅವಳಿ ಮಕ್ಕಳನ್ನು ರಾಯಗಂಜ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿಯೂ ಶಿಶುಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆ ಕಂದಮ್ಮಗಳನ್ನು ಸಿಲಿಗುರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಗುರುವಾರದಂದು ಒಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಈ ಮಗುವನ್ನು ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಬಳಿಕ ಈ ಮಗುವನ್ನು ಕರೆದುಕೊಂಡು ತಾಯಿ ಕಲಿಯಾಗಂಜ್ಗೆ ವಾಪಸಾಗಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಈ ವೇಳೆ ಅಸೀಂ ಮಗುವಿನೊಂದಿಗೆ ಆಸ್ಪತ್ರೆಯಲ್ಲಿದ್ದರು. ಆದರೆ ಶನಿವಾರ ಮಗುವಿನ ಸ್ಥಿತಿ ಗಂಭೀರವಾಗಿದ್ದು, ರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.