ತಿರುಚ್ಚಿ (ತಮಿಳುನಾಡು):ಮದುವೆಗೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದ 19 ವರ್ಷದ ಯುವತಿಗೆ ಪೋಷಕರೇ ವಿಷವಿಟ್ಟು ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಯುವತಿಯ ತಂದೆ ಮತ್ತು ಆಕೆಯ ಚಿಕ್ಕಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 5ರಂದು ಕಾಲುವೆಯ ಪೊದೆಯೊಂದರ ಬಳಿ ಶಿಶು ಪತ್ತೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಶಿಶುವನ್ನು ರಕ್ಷಿಸಿ ಚಿಕಿತ್ಸೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ನಂತರ ಶಿಶುವಿನ ಪೋಷಕರಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದರು. ಇದರ ನಡುವೆ 19 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ ಇದೇ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತೆಯೇ, ಯುವತಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಆದರೆ, ಚಿಕಿತ್ಸೆ ನೀಡುತ್ತಿರುವಾಗಲೇ ಆಕೆಯ ಸ್ಥಿತಿ ಹದಗೆಟ್ಟಿದ್ದು, ಪೊಲೀಸರ ಹೇಳಿಕೆ ದಾಖಲಿಸಿಕೊಂಡು ಸ್ವಲ್ಪ ಹೊತ್ತಿನಲ್ಲಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ಇತ್ತ, ಯುವತಿಯ ಹೇಳಿಕೆ ಹಾಗೂ ತಮಗೆ ಸಿಕ್ಕ ಇತರ ಮಾಹಿತಿ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.