ತೆಹ್ರಿ (ಉತ್ತರಾಖಂಡ):ಇಲ್ಲಿನ ತೆಹ್ರಿ ಡ್ಯಾಂ ಹಿನ್ನೀರಿನಲ್ಲಿ ತಂದೆ ಮತ್ತು ಇಬ್ಬರು ಮಕ್ಕಳು ಈಜು ಸ್ಪರ್ಧೆಯಲ್ಲಿ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಇವರು ಲೈಫ್ ಜಾಕೆಟ್ ಧರಿಸದೇ 15 ಕಿಲೋ ಮೀಟರ್ ದೂರ ಈಜಾಡಿದ್ದು ವಿಶೇಷವಾಗಿತ್ತು.
ಸಾಹಸ ಕ್ರೀಡಾಪ್ರೇಮಿಗಳಿಗಾಗಿ ಏಷ್ಯಾದಲ್ಲಿಯೇ ಅತಿ ಎತ್ತರ ಹೊಂದಿರುವ ತೆಹ್ರಿ ಅಣೆಕಟ್ಟೆಯಲ್ಲಿ ಪ್ರತಿ ವರ್ಷ ವಿಶೇಷ ಈಜು ಸ್ಪರ್ಧೆ ಆಯೋಜಿಸಲಾಗುತ್ತದೆ. ತೆಹ್ರಿ ಜಿಲ್ಲೆಯ ಪ್ರತಾಪನಗರದ ಮೋಟ್ನಾ ಗ್ರಾಮದ ತ್ರಿಲೋಕ್ ಸಿಂಗ್ ರಾವತ್ (50), ಮಕ್ಕಳಾದ ರಿಷಭ್ ರಾವತ್ (20) ಮತ್ತು ಪರಸ್ವೀರ್ ರಾವತ್ (17) ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಸೋಮವಾರ ಬೆಳಗ್ಗೆ 8 ಗಂಟೆಗೆ ಕೋಟಿ ಕಾಲೋನಿಯಿಂದ ಸಯಸು ಸೇತುವೆವರೆಗೆ ತಂದೆ-ಮಗ ಒಟ್ಟಿಗೆ ಈಜಲು ಆರಂಭಿಸಿದ್ದರು. ಸುಮಾರು 3 ಗಂಟೆಗಳ ಕಾಲ ಈಜಿದ ನಂತರ ಮೂವರು ಬಾಲ್ಡಿಯಾನಾ ಪ್ರದೇಶ ತಲುಪಿದ್ದಾರೆ. ಈ ಮುಖೇನ ಈಗಾಗಲೇ ತಮ್ಮ ಹೆಸರಿನಲ್ಲೇ ಇದ್ದ 12.25 ಕಿ.ಮೀ ದೂರದ ರಾಜ್ಯಮಟ್ಟದ ದಾಖಲೆಯನ್ನು ಸರಿಗಟ್ಟಿದರು.
ತಂದೆ ಹಾಗು ಮಕ್ಕಳು ತಮ್ಮ ದಾಖಲೆಯನ್ನು ಮೆಟ್ಟಿ ನಿಂತು ಮತ್ತಷ್ಟು ಈಜಿ ಹೊಸ ದಾಖಲೆ ನಿರ್ಮಿಸಲು ಮುಂದಾದರು. 15 ಕಿಲೋ ಮೀಟರ್‌ಗಳ ಸಂಪೂರ್ಣ ಗುರಿಯನ್ನು ಕೇವಲ 5 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಆದರೆ 2021ರಲ್ಲಿ ಭಾಗವಹಿಸಿದ್ದ ಈ ಸ್ಪರ್ಧೆಗಳಲ್ಲಿ ಇದೀಗ ಲೈಫ್ ಜಾಕೆಟ್ ಧರಿಸದೇ ಈಜಿ ಗುರಿ ಸಾಧಿಸಿರುವುದು ಗಮನಾರ್ಹ.
ತಂದೆಯನ್ನೇ ಮೀರಿಸಿದ ಪುತ್ರರು!:ಸೆಪ್ಟೆಂಬರ್ 30, 2021ರಂದು ನಡೆದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ತಂದೆ ಮತ್ತು ಮಕ್ಕಳು ಒಟ್ಟು 12.25 ಕಿಲೋಮೀಟರ್ ದೂರವನ್ನು ಪೂರ್ಣಗೊಳಿಸಿದ್ದರು. ರಿಷಭ್ ರಾವತ್ ಮತ್ತು ಪರಸ್ವೀರ್ ರಾವತ್ ಮೂರುವರೆ ಗಂಟೆಗಳಲ್ಲಿ ಈ ಸ್ಫರ್ಧೆಯನ್ನು ಪೂರ್ಣಗೊಳಿಸಿದ್ದರು. ತ್ರಿಲೋಕ್ ಸಿಂಗ್ ರಾವತ್ ನಾಲ್ಕೂವರೆ ಗಂಟೆ ತೆಗೆದುಕೊಂಡು ದಡ ಸೇರಿದ್ದರು. ಈ ಮೂವರು ತೆಹ್ರಿ ಡ್ಯಾಂನ ಹಿನ್ನೀರಿನಲ್ಲಿ ಇಷ್ಟು ದೂರ ಈಜಿದ ಮೊದಲಿಗರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಪೊಲೀಸರಿಂದ ತಪ್ಪಿಸಿಕೊಳ್ಳಲು 3 ಕಿಲೋ ಮೀಟರ್ ಕಾಲುವೆಯಲ್ಲಿ ಈಜಿದ ಟಿಪ್ಪರ್ ಚಾಲಕ!
ದಕ್ಷಿಣ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಿಂದ ಪ್ರಸಿದ್ಧ ಎಲಿಫೆಂಟಾ ಗುಹೆಗಳವರೆಗಿನ 16 ಕಿ.ಮೀ ದೂರವನ್ನು ಐದೂವರೆ ಗಂಟೆಗಳಲ್ಲಿ ಅರಬ್ಬಿ ಸಮುದ್ರದ ಅಲೆಗಳ ವಿರುದ್ಧ ಈಜಿದ್ದಾಗಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಹಿರಿಯ ಅಧಿಕಾರಿ ಕೃಷ್ಣ ಪ್ರಕಾಶ್ ಈ ಹಿಂದೆ ಹೇಳಿದ್ದು ಸುದ್ದಿಯಾಗಿತ್ತು. ಇಂಥ ಸಾಹಸ ಮಾಡಿದ ವಿಶ್ವದ ಮೊದಲ ವ್ಯಕ್ತಿ ನಾನು ಎಂದು ಅವರು ತಿಳಿಸಿದ್ದರು. ಆದರೆ ಈಜು ಸಂಸ್ಥೆ ಯಾವುದೇ ದೃಢೀಕರಣ ನೀಡಿರಲಿಲ್ಲ.