ದೋಹಾ (ಕತಾರ್): ಫುಟ್‌ಬಾಲ್ ವಿಶ್ವಕಪ್‌ನಿಂದಾಗಿ ಕತಾರ್ ಸಾಕಷ್ಟು ಸುದ್ದಿಯಲ್ಲಿದೆ. ಆದರೆ, ಇದೇ ದೇಶದಲ್ಲಿ 90 ದಿನಗಳಿಂದ ಜೈಲಿನಲ್ಲಿರುವ ಎಂಟು ಜನ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿ ಬಗ್ಗೆ ಅದೆಷ್ಟೋ ಜನರಿಗೆ ಗೊತ್ತಿಲ್ಲ.
ಹೌದು, ಈ ಎಂಟು ಜನ ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿ ಆಗಸ್ಟ್ 30ರಿಂದ ತಮ್ಮ ಕುಟುಂಬಗಳ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಕತಾರ್‌ನ ಆಂತರಿಕ ಸಚಿವಾಲಯದ ರಾಜ್ಯ ಭದ್ರತಾ ಬ್ಯೂರೋದವರು ಮಾಜಿ ಸಿಬ್ಬಂದಿಯನ್ನು ತಮ್ಮ ಮನೆಗಳಿಂದ ಮಧ್ಯರಾತ್ರಿ ಕರೆದೊಯ್ದಿದ್ದಾರೆ ಎಂದು ದೋಹಾದಲ್ಲಿರುವ ಕಚೇರಿಯಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಇದೀಗ ಈ ಬಗ್ಗೆ ಇಂಡಿಯನ್ ಎಕ್ಸ್ ಸರ್ವಿಸ್‌ಮೆನ್ ಮೂವ್‌ಮೆಂಟ್ (ಐಇಎಸ್ಎಂ) ಸಂಘಟನೆಯು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಮಧ್ಯಸ್ಥಿಕೆ ವಹಿಸುವಂತೆ ಕೋರಲಾಗಿದೆ. ಅಲ್ಲದೇ, ಈ ಪತ್ರದ ಪ್ರತಿಗಳನ್ನು ಪ್ರಧಾನಿ, ರಕ್ಷಣಾ ಸಚಿವರು ಮತ್ತು ಮೂರು ಸೇನಾ ಮುಖ್ಯಸ್ಥರಿಗೂ ರವಾನಿಸಲಾಗಿದೆ.
ಕತಾರ್ ನೌಕಾಪಡೆಯ ಸಿಬ್ಬಂದಿಗೆ ತರಬೇತಿ:ಭಾರತ ಮತ್ತು ಕತಾರ್ ನಡುವಿನ ತಿಳುವಳಿಕೆ ಒಪ್ಪಂದದ (MoU) ಪ್ರಕಾರ ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿ ದೋಹಾದಲ್ಲಿ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವೀಸ್ಗೆ ಕೆಲಸ ಮಾಡುತ್ತಿದ್ದಾರೆ. ಕತಾರ್ ನೌಕಾಪಡೆಯ ಸಿಬ್ಬಂದಿಗೆ ತರಬೇತಿ ನೀಡುವುದು ಅವರ ಕೆಲಸವಾಗಿತ್ತು ಎಂದು ಐಇಎಸ್ಎಂ ಅಧ್ಯಕ್ಷರಾದ ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಐಇಎಸ್ಎಂ ಬರೆದ ಪತ್ರ ಸ್ನೇಹಪರ ನೌಕಾಪಡೆಯ ಸಿಬ್ಬಂದಿಗೆ ತರಬೇತಿ ನೀಡುವ ನೀತಿಯಡಿಯಲ್ಲಿ ಎಂಟು ಮಂದಿ ಕೆಲಸ ಮಾಡುತ್ತಿದ್ದಾಗ ಅವರ ಬಂಧನ ಹೇಗೆ ಸಂಭವಿಸಿತು ಎಂಬುದೇ ಆಶ್ಚರ್ಯವಾಗಿದೆ. ಇದನ್ನು ಕತಾರ್‌ನಲ್ಲಿರುವ ಭಾರತೀಯ ರಾಯಭಾರಿಗಳು ಸಹ ಅನುಮೋದಿಸಿದ್ದಾರೆ ಎಂದು ನಿವೃತ್ತ ಮೇಜರ್ ಜನರಲ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 3ರಂದು ಎಂಟು ಮಂದಿ ಬಂಧನದಲ್ಲಿದ್ದಾರೆ ಎಂದು ತಿಳಿದಾಗ ಒಮ್ಮೆ ಮಾತ್ರ ಕಾನ್ಸುಲರ್ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಮೂಲಗಳ ಪ್ರಕಾರ, ಭಾರತದ ನೆರೆಹೊರೆಯವರೊಬ್ಬರ ಆಜ್ಞೆಯ ಮೇರೆಗೆ ಮಾಜಿ ಸಿಬ್ಬಂದಿ ಮೇಲೆ ತಪ್ಪಾಗಿ ಬೇಹುಗಾರಿಕೆ ಆರೋಪವನ್ನು ಮಾಡಲಾಗಿದೆ. ಇದು ಅತ್ಯಂತ ಕೆಟ್ಟ ರೀತಿಯ ಕಿಡಿಗೇಡಿತನವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ನೌಕಾಪಡೆಯ ಮಾಜಿ ಕ್ಯಾಪ್ಟನ್ಗಳಾದ ಸೌರಭ್ ವಶಿಷ್ಟ್, ನವತೇಜ್ ಸಿಂಗ್ ಗಿಲ್, ಹಿರಿಯ ದರ್ಜೆಯ ಮಾಜಿ ಅಧಿಕಾರಿಗಳಾದ ಪೂರ್ಣೇಂದು ತಿವಾರಿ, ಬೀರೇಂದ್ರ ಕುಮಾರ್ ವರ್ಮಾ, ಸುಗ್ನಾಕರ್ ಪಕಲಾ, ಅಮಿತ್ ನಾಗ್ಪಾಲ್, ಸಂಜೀವ್ ಗುಪ್ತಾ ಮತ್ತು ಸೈಲರ್ ರಾಗೇಶ್ ಅವರು ಬಂಧನದಲ್ಲಿದ್ದಾರೆ. ಈ ಎಂಟು ಮಂದಿಯ ಕುಟುಂಬಗಳು ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಚಿಂತಿತರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಬರೆದ ಪತ್ರದಲ್ಲಿ ಮೇಜರ್ ಜನರಲ್ ಸಿಂಗ್ ಗಮನ ಸೆಳದಿದ್ದಾರೆ.
ಇದೇ ವೇಳೆ ಎಂಟು ಜನರ ಬಿಡುಗಡೆ ಮತ್ತು ಶೀಘ್ರ ವಾಪಸಾತಿಗಾಗಿ ಎದುರು ನೋಡಲಾಗುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ ಎಂಟು ಮಂದಿ ಸುಳ್ಳು ತಪ್ಪೊಪ್ಪಿಗೆಗಳನ್ನು ಹೊರತೆಗೆಯಲು ಚಿತ್ರಹಿಂಸೆಯನ್ನು ಎದುರಿಸಬೇಕಾಗುತ್ತದೆ ಎಂದು ನಿವೃತ್ತ ಮೇಜರ್ ಜನರಲ್ ಸತ್ಬೀರ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾನ್ಸ್ಟೇಬಲ್ಗೆ ಕಪಾಳಮೋಕ್ಷ ಆರೋಪ.. ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್ಐಆರ್