ಹರಿಯಾಣ ಸರ್ಕಾರವು ಮಾಲಿನ್ಯಕಾರಕಗಳನ್ನು ನದಿಗೆ ಬಿಡುತ್ತಿರುವುದನ್ನು ತಡೆಯುವಂತೆ ದೆಹಲಿ ಜಲ ಮಂಡಳಿ (ಡಿಜೆಬಿ) ಸಲ್ಲಿಸಿದ್ದ ಅರ್ಜಿಯಿಂದಾಗಿ ಸುಪ್ರೀಂಕೋರ್ಟ್ ಪ್ರಕರಣವನ್ನು ಎರಡನೇ ಬಾರಿಗೆ ವಿಚಾರಣೆ ನಡೆಸಲು ಪ್ರೇರೆಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ, ಹಿಮಾಚಲ ಪ್ರದೇಶ, ಹರ್ಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರಗಳಿಗೆ ಕೋರ್ಟ್ ಎಚ್ಚರಿಕೆ ನೀಡಿದೆ.
ದೇಶದ ಅನೇಕ ನದಿಗಳು ಯಮುನಾ ನದಿಯ ಹಣೆಬರಹವನ್ನೇ ಎದುರಿಸುತ್ತಿವೆ. ಗೋದಾವರಿ, ಕೃಷ್ಣ, ಮಂಜಿರ, ಮುಸಿ, ಪೆನ್ನಾ, ತುಂಗಭದ್ರಾ, ನಾಗಾವಳಿ ಮತ್ತು ವಂಶಧರ ಮಾಲಿನ್ಯಕ್ಕೆ ತುತ್ತಾಗಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ( ಸಿ ಪಿ ಸಿ ಬಿ ) ಅಂದಾಜಿನ ಪ್ರಕಾರ, ಭಾರತದ 450 ನದಿಗಳಲ್ಲಿ 350 ಕಲುಷಿತಗೊಂಡಿವೆ. 10 ವರ್ಷಗಳ ಹಿಂದೆ ಈ ಸಂಖ್ಯೆ 121 ಇತ್ತು. 2015 ರ ಸಿಪಿಸಿಬಿ ವರದಿ ಪ್ರಕಾರ, ಭಾರತದ ಪಟ್ಟಣಗಳು ಮತ್ತು ನಗರಗಳಲ್ಲಿ 6,194.8 ಕೋಟಿ ಲೀಟರ್ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ದೇಶದ ನೀರಿನ ಸಂಸ್ಕರಣಾ ಘಟಕಗಳು ಕೇವಲ ಶೇ.38ರಷ್ಟು ಕಲುಷಿತ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ. ಇದರ ಪರಿಣಾಮ ಸಂಸ್ಕರಿಸದ 3,800 ಕೋಟಿ ಲೀಟರ್ ನೀರನ್ನು ನದಿಗಳು, ಸರೋವರಗಳು ಮತ್ತಿತರ ಜಲಮೂಲಗಳಿಗೆ ಬಿಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ಪುರಸಭೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಜಲಮೂಲಗಳಲ್ಲಿ ತ್ಯಾಜ್ಯ ವಿಲೇವಾರಿ ಅಸ್ತವ್ಯಸ್ತವಾಗಿದೆ ಎಂಬುದು ಮಾಲಿನ್ಯ ನಿಯಂತ್ರಣ ಕ್ರಮಗಳು ಎಷ್ಟು ಶೋಚನೀಯ ಎಂಬುದನ್ನು ತೋರಿಸುತ್ತದೆ. ಮತ್ತೊಂದೆಡೆ ನೀರಿನ ಯೋಜನೆಗಳಾದ ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ ( ಎನ್ ಆರ್ ಸಿ ಪಿ ), ಅಟಲ್ ಮಿಷನ್ ( ಎ ಎಂ ಆರ್ ಯು ಟಿ ) ಮತ್ತು ನಮಾಮಿ ಗಂಗೆ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯರ್ಥವಾಗಿ ಹಂಚಿಕೆ ಮಾಡಲಾಗಿದೆ.
ದೇಶದ ಬಹುಪಾಲು ನೀರಿನ ಸಂಪನ್ಮೂಲಗಳು ನಿರುಪಯುಕ್ತವಾಗಿವೆ ಎಂದು ಸಿಪಿಸಿಬಿ ಬಹಿರಂಗಪಡಿಸಿದೆ. ಪವಿತ್ರ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ ಪ್ರತಿಷ್ಠಿತ ನಮಾಮಿ ಗಂಗೆ ಕಾರ್ಯಕ್ರಮ ಪ್ರಾರಂಭಿಸಿದೆ. 20,000 ಕೋಟಿ ರೂ.ಗಳ ಯೋಜನೆ 2020 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದರೂ, ಇದುವರೆಗೆ ಕೇವಲ ಶೇ.37 ರಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಇದು ಅಭಿವೃದ್ಧಿ ಯೋಜನೆಗಳ ಬಗೆಗಿನ ನಮ್ಮ ಅಧಿಕೃತ ವ್ಯವಸ್ಥೆಯ ಬದ್ಧತೆಯನ್ನು ಬಿಂಬಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡುವುದು ಸಮಸ್ಯೆಗೆ ಪರಿಹಾರ ಅಲ್ಲ. ಸಂಪನ್ಮೂಲಗಳನ್ನು ಸಂರಕ್ಷಿಸುವಲ್ಲಿ ಕಠಿಣ ಕಾನೂನು ಮತ್ತು ಮಾಲಿನ್ಯ ನಿಯಂತ್ರಣ ಕ್ರಮಗಳು ಬಹಳ ಮುಖ್ಯ ಆಗುತ್ತವೆ. ಉದಾಹರಣೆಗೆ ನಮಾಮಿ ಗಂಗೆ ಯೋಜನೆಯ ಭಾಗವಾಗಿ 11,000 ಕೋಟಿ ರೂ.ಗಳ ನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಯಿತು. ಅವು ದಿನಕ್ಕೆ 117 ಕೋಟಿ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಿಸುವ ನಿರೀಕ್ಷೆ ಇತ್ತು. ಆದರೂ ಪ್ರತಿದಿನ 290 ಕೋಟಿ ಲೀಟರ್ ಒಳಚರಂಡಿ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಗುರುತಿಸಿದೆ. ದೇಶಾದ್ಯಂತ 13 ನದಿಗಳನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಗೋದಾವರಿ ಮತ್ತು ಕೃಷ್ಣಾ ಈ ಯೋಜನೆಯ ಪ್ರಮುಖ ನದಿಗಳಲ್ಲಿ ಸೇರಿವೆ.