ನವದೆಹಲಿ:''ಅಪೂರ್ಣ ಕೆವೈಸಿ (Know Your Customer) ಹೊಂದಿರುವ ಫಾಸ್ಟ್‌ಟ್ಯಾಗ್‌ಗಳನ್ನು (FASTags) ಜನವರಿ 31, 2024ರ ನಂತರ ಬ್ಯಾಂಕ್‌ಗಳು ನಿಷ್ಕ್ರಿಯಗೊಳಿಸುತ್ತವೆ'' ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಹೇಳಿದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯ ದಕ್ಷತೆ ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಗೆ 'ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್' ಎಂಬ ವ್ಯವಸ್ಥೆ ಜಾರಿಗೆ ತರಲಾಗಿತ್ತು.
ಹಲವು ವಾಹನಗಳಿಗೆ ಒಂದೇ ಫಾಸ್ಟ್‌ಟ್ಯಾಗ್ ಬಳಸುವ/ಒಂದೇ ವಾಹನಕ್ಕೆ ಹಲವು ಫಾಸ್ಟ್‌ಟ್ಯಾಗ್‌ಗಳನ್ನು ಲಿಂಕ್ ಮಾಡುವ ಬಳಕೆದಾರರ ನಡವಳಿಕೆಯನ್ನು ತಪ್ಪಿಸುವ ಉದ್ದೇಶದಿಂದ ಹೆದ್ದಾರಿ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಕೆವೈಸಿಯನ್ನು ನವೀಕರಿಸುವ ಮೂಲಕ ಇತ್ತೀಚಿನ ಫಾಸ್ಟ್‌ಟ್ಯಾಗ್‌ನ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರವು ತನ್ನ ಬಳಕೆದಾರರನ್ನು ಪ್ರೋತ್ಸಾಹಿಸುತ್ತಿದೆ. ಅನನುಕೂಲತೆ ತಪ್ಪಿಸಲು ಬಳಕೆದಾರರು ತಮ್ಮ ಇತ್ತೀಚಿನ ಫಾಸ್ಟ್‌ಟ್ಯಾಗ್‌ನ ಕೆವೈಸಿ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್: ಫಾಸ್ಟ್‌ಟ್ಯಾಗ್ ಬಳಕೆದಾರರು 'ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್' ಅನ್ನು ಅನುಸರಿಸಬೇಕು. ತಮ್ಮ ಬ್ಯಾಂಕ್‌ಗಳ ಮೂಲಕ ಈ ಹಿಂದೆ ನೀಡಲಾದ ಹಳೆಯ ಎಲ್ಲಾ ಫಾಸ್ಟ್‌ಟ್ಯಾಗ್‌ಗಳನ್ನು ತ್ಯಜಿಸಬೇಕು ಎಂದು ತಿಳಿಸಿದೆ. ಜನವರಿ 31ರ ನಂತರ ಹಿಂದಿನ ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅವುಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದರಿಂದ ಇತ್ತೀಚಿನ ಫಾಸ್ಟ್‌ಟ್ಯಾಗ್ ಖಾತೆ ಮಾತ್ರ, ಅಂದರೆ ಕೆವೈಸಿ ಪೂರ್ಣಗೊಂಡಿರುವ ಫಾಸ್ಟ್‌ಟ್ಯಾಗ್‌ಗಳು ಸಕ್ರಿಯವಾಗಿರುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿ ಅಥವಾ ಪ್ರಶ್ನೆಗಳಿಗಾಗಿ ಫಾಸ್ಟ್‌ಟ್ಯಾಗ್ ಬಳಕೆದಾರರು ಹತ್ತಿರದ ಟೋಲ್ ಪ್ಲಾಜಾಗಳು, ಆಯಾ ವಿತರಕರ ಬ್ಯಾಂಕ್‌ಗಳ ಟೋಲ್-ಫ್ರೀ ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಲಹೆ ನೀಡಿದೆ.