ಶ್ರೀನಗರ:ತಾಲಿಬಾನಿಗರು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ್ದು, ಅವರು ಮಾನವ ಹಕ್ಕುಗಳನ್ನು ಗೌರವಿಸುತ್ತಾರೆ. ಎಲ್ಲಾ ದೇಶಗಳೊಂದಿಗೂ ಸ್ನೇಹ ಸಂಬಂಧವನ್ನು ಬಯಸುವ ವಿಶ್ವಾಸವಿದೆ ಎಂದು ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ (NC) ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದರು.
ನಸೀಮ್ ಬಾಗ್‌ನಲ್ಲಿರುವ ಎನ್‌ಸಿ ಸಂಸ್ಥಾಪಕ ಹಾಗೂ ಫಾರೂಕ್ ಅವರ ತಂದೆ ಶೇಕ್ ಮಹಮ್ಮದ್ ಅಬ್ದುಲ್ಲಾ ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ತಾಲಿಬಾನ್ ಅಫ್ಘಾನ್ ಅನ್ನು ಕೈವಶ ಮಾಡಿಕೊಂಡಿದೆ. ಈಗ ಅವರು ದೇಶವನ್ನು ಪೋಷಿಸಬೇಕು. ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.
ಜಮ್ಮು ಕಾಶ್ಮೀರಕ್ಕೆ ಸಾಂವಿಧಾನಿಕ ವಿಶೇಷ ಸ್ಥಾನಮಾನ ಪುನಃ ಪಡೆಯುವ ಹೋರಾಟಕ್ಕೆ ಬದ್ಧವಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆದಾಗ ತಮ್ಮ ಪಕ್ಷ ಸ್ಪರ್ಧಿಸಲಿದೆ. ಕೇಂದ್ರವು ಸಂವಿಧಾನದ 370 ನೇ ವಿಧಿ ರದ್ದುಗೊಳಿಸಿದೆ. 2019ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದೆ. ವಿಶೇಷ ಸ್ಥಾನಮಾನವನ್ನು ಮತ್ತೆ ಪಡೆಯುವ ಹೋರಾಟಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ಯಾವಾಗ ಚುನಾವಣೆ ನಡೆಯುತ್ತದೆ ಅನ್ನೋದು ನಮಗೆ ತಿಳಿದಿಲ್ಲ. ಆದರೆ ನಾವು ಚುನಾವಣೆಯ ಬಗ್ಗೆ ಸ್ಪಷ್ಟವಾಗಿದ್ದೇವೆ. ಯಾವಾಗ ಚುನಾವಣೆ ನಡೆದರೂ ತಮ್ಮ ಪಕ್ಷ ಸ್ಪರ್ಧಿಸುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.